ಬೆಳಗಾವಿ: ವಿರೋಧ ಪಕ್ಷದ ನಾಯಕ ಆರ್. ಅಶೋಕ್ಗೆ ಶುಭಕೋರಿ ಮಾತನಾಡಲು ಬಸನಗೌಡ ಪಾಟೀಲ್ ಯತ್ನಾಳ್ ನಿರಾಕರಿಸಿದ ಘಟನೆ ನಡೆದಿದೆ. ವಿಧಾನಸಭೆ ಕಲಾಪದಲ್ಲಿ ವಿಪಕ್ಷ ನಾಯಕನಾಗಿ ಆಯ್ಕೆಯಾದ ಹಿನ್ನೆಲೆ ಅಭಿನಂದನೆ ಸಲ್ಲಿಸುವ ವೇಳೆ ಯತ್ನಾಳ್ ಮಾತನಾಡಲು ನಿರಾಕರಿಸಿದರು. ಶುಭ ಕೋರಿ ಮಾತನಾಡುತ್ತೀರಾ ಎಂದು ಯತ್ನಾಳ್ಗೆ ಸ್ಪೀಕರ್ ಖಾದರ್ ಕೇಳುತ್ತಾರೆ. ಈ ವೇಳೆ ಯತ್ನಾಳ್ ನಾನು ಮಾತನಾಡಲ್ಲ ಎಂದು ಕೈಸನ್ನೆಯಿಂದ ನಿರಾಕರಣೆ ಮಾಡಿದರು. ಯತ್ನಾಳ್ ಮಾತನಾಡಲು ನಿರಾಕರಣೆ ಮಾಡಿದ್ದರಿಂದ ಆರ್. ಅಶೋಕ್ಗೆ ಸದನದಲ್ಲಿ ಮುಜುಗರ ಉಂಟಾಯಿತು.
ಇನ್ನು ಅಶ್ವತ್ಥ ನಾರಾಯಣ, ಸಿ.ಸಿ. ಪಾಟೀಲ್, ಬಿ.ವೈ. ವಿಜಯೇಂದ್ರ ಸೇರಿದಂತೆ ಇತರ ನಾಯಕರು ಶುಭ ಕೋರಿದರು. ವಿರೋಧ ಪಕ್ಷದ ನಾಯಕ, ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಯಾವುದೇ ಸ್ಥಾನ ಸಿಗದೇ ಇರುವುದರಿಂದ ತೀವ್ರ ಅಸಮಾಧಾನಗೊಂಡಿದ್ದಾರೆ.
ಈ ಕಾರಣವಾ ಏನೋ ವಿಪಕ್ಷ ನಾಯಕನಾಗಿ ಆಯ್ಕೆಯಾದ ಹಿನ್ನೆಲೆ ಅಶೋಕ್ ಅವರಿಗೆ ಅಭಿನಂದನೆ ಸಲ್ಲಿಸುವ ವೇಳೆ ಯತ್ನಾಳ್ ಮಾತನಾಡಲು ನಿರಾಕರಿಸಿದರು. ಇನ್ನು ಬರದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ವಿಪಕ್ಷ ನಾಯಕ ಆರ್. ಅಶೋಕ್ ಸ್ಪೀಕರ್ನ್ನು ಒತ್ತಾಯಿಸಿದರು. ಆಗ ಯತ್ನಾಳ್ ಪ್ರಶ್ನೋತ್ತರ ಮೊದಲು ಬಳಿಕ ಬರದ ಮೇಲೆ ಚರ್ಚೆ ಮಾಡೋಣ ಎಂದು ಹೇಳುವ ಮೂಲಕ ಸ್ವಪಕ್ಷಕ್ಕೆ ಕುಟುಕಿದರು.
ವಿಪಕ್ಷ ನಾಯಕ ಸ್ಥಾನ ನೀಡಿದ್ದು ಮೋದಿ, ಜೆ.ಪಿ. ನಡ್ಡಾ-ಅಶೋಕ್ : ನನ್ನ ಈ ಸ್ಥಾನಕ್ಕೆ ಕೂರಿಸುವ ತೀರ್ಮಾನ ಮಾಡಿದ್ದು, ನರೇಂದ್ರ ಮೋದಿ, ನಡ್ಡಾ, ಅಮಿತ್ ಶಾ, ಯಡಿಯೂರಪ್ಪನವರು. ಈ ಸ್ಥಾನ ನನಗೆ ಒಂದು ಚಾಲೆಂಜಿಂಗ್ ಸ್ಥಾನ. ಈ ಸ್ಥಾನದಲ್ಲಿ ಕೂತು ಸಮಸ್ಯೆಗಳ ಬಗ್ಗೆ ವರ್ಕೌಟ್ ಮಾಡಬೇಕು. ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಬೇಕು. ನಿರ್ಭೀತಿ ಇಲ್ಲದೇ ಯಾವುದೇ ಮುಲಾಜಿಲ್ಲದೇ ಸರ್ಕಾರವನ್ನು ಟೀಕಿಸುತ್ತೇನೆ. ಈ ಹಿಂದೆಯಿಂದಲೂ ಹೋರಾಟ ಮಾಡಿ ಬಂದವನು. ತುರ್ತು ಸಂದರ್ಭದಲ್ಲಿ ಹೋರಾಟ ಮಾಡಿ ಜೈಲಿನ ವನವಾಸ ಅನುಭವಿಸಿದ್ದೆ. ಸ್ಪೀಕರ್ ಸಹಕಾರ ಅತ್ಯಂತ ಪ್ರಮುಖ. ನೀವು ಬಲಗಡೆ ನೋಡೋದು ಬಿಟ್ಟು ಎಡಗಡೆ ಕಡೆ ಹೆಚ್ಚು ನೋಡಬೇಕು. ನಮಗೆ ನೀವು ಹೆಚ್ಚಿನ ಸಹಕಾರ ಕೊಡಬೇಕು. ಜೆಡಿಎಸ್ನವರು ಎನ್ಡಿಎ ಪಾರ್ಟ್ನರ್ ಆಗಿದ್ದಾರೆ. ಅವರ ಜೊತೆಗೂಡಿ ಸದನದಲ್ಲಿ ಜನರ ಸಮಸ್ಯೆಗಳನ್ನು ಧ್ವನಿ ಎತ್ತುತ್ತೇವೆ ಎಂದರು.
ನಾನೇ ವಿಪಕ್ಷ ನಾಯಕನೆಂದು ಒಪ್ಕೊತೀರಾ?-ಯತ್ನಾಳ್: ಮಾಧ್ಯಮದವರ ಜೊತೆ ಮಾತನಾಡಿದ ಬಸನಗೌಡ ಯತ್ನಾಳ್, ನನ್ನ ಎರಡು ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡಿದೆ. ಇನ್ನಾದರೂ ನಾನು ವಿಪಕ್ಷ ನಾಯಕ ಎಂದು ಒಪ್ಕೊತೀರಾ ಎಂದು ಪ್ರಶ್ನಿಸಿದರು. ಎಲ್ಲಿಯವರೆಗೆ ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಗೋದಿಲ್ಲವೋ ಅಲ್ಲಿಯತನಕ ನಾನು ಶುಭ ಕೋರುವ ಪ್ರಶ್ನೆ ಇಲ್ಲ. ಉತ್ತರ ಕರ್ನಾಟಕದ ಸ್ವಾಭಿಮಾನಕ್ಕೆ ದಕ್ಕೆ ಆಗಿದೆ. ಅಲ್ಲಿಯ ತನಕ ನಾನು ಶುಭ ಕೋರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಿಮ್ಮ ಕೋಪ ಯಾರ ವಿರುದ್ಧವಾಗಿದೆ ಎಂಬ ಮಾಧ್ಯಮದ ಪ್ರಶ್ನೆಗೆ, ನನ್ನ ಹೋರಾಟ ಉತ್ತರ ಕರ್ನಾಟಕದ ಪರವಾಗಿ ಇವತ್ತು(ನಿನ್ನೆ) ಎರಡು ವಿಷಯಗಳ ಬಗ್ಗೆ ಮಾತನಾಡಲು ಅಧ್ಯಕ್ಷರು ಅವಕಾಶ ಮಾಡಿಕೊಟ್ಟರು. ಪಿಎಸ್ಐ ಪರೀಕ್ಷೆ ಮುಂದೂಡಿಕೆ ಮತ್ತು ಉತ್ತರ ಕರ್ನಾಟಕದ ಸಮಸ್ಯೆ ಚರ್ಚೆ ಬಗ್ಗೆ ಬೇಡಿಕೆ ಇಟ್ಟಿದ್ದೆ. ನನ್ನ ಹೋರಾಟಕ್ಕೆ ಎಲ್ಲರೂ ಮಣಿಯುತ್ತಾರೆ. ನನ್ನ ಎರಡು ಬೇಡಿಕೆಗಳಿಗೆ ಸರ್ಕಾರ ಒಪ್ಪಿಕೊಂಡಿದೆ ಎಂದರು.
ಇದನ್ನೂ ಓದಿ: ಅರಣ್ಯದಲ್ಲಿ ಶೇ.40ರಷ್ಟು ಕಳೆ, ವನ್ಯಜೀವಿಗಳಿಗೆ ಸಮಸ್ಯೆಯಾಗುತ್ತಿರುವುದು ನಿಜ : ಅರಣ್ಯ ಸಚಿವ ಈಶ್ವರ ಖಂಡ್ರೆ