ಬೆಳಗಾವಿ : ಬೆಲೆ ಏರಿಕೆ ಸೇರಿದಂತೆ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಕರೆದಿದ್ದ ಬಂದ್ಗೆ ಗಡಿ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದಲ್ಲಿ ಎಐಟಿಸಿಯುಸಿ, ಸಿಐಟಿಯು, ಪಂಚಾಯತ್ ನೌಕರರ ಸಂಘ, ಅಂಗನವಾಡಿ ಕಾರ್ಯಕರ್ತೆಯರ ಸಂಘ, ಕೆಎಸ್ಆರ್ಟಿಸಿ ನೌಕರರ ಸಂಘ, ಅಕ್ಷರ ದಾಸೋಹ ನೌಕರರ ಸಂಘ, ಕೆಪಿಸಿಸಿ ಕಾರ್ಮಿಕ ಘಟಕ, ಔಷಧ ಮಾರಾಟಗಾರರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಬಂದ್ ಕರೆದಿದ್ದರೂ ಎಂದಿನಂತೆ ಬಸ್, ಆಟೋ, ಅಂಗಡಿ ಮುಂಗಟ್ಟು, ಶಾಲಾ-ಕಾಲೇಜು ಆರಂಭಗೊಂಡಿದ್ದು, ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಚಿಕ್ಕೋಡಿಯಲ್ಲಿ ಬಂದ್ಗೆ ನೀರಸ ಪ್ರತಿಕ್ರಿಯೆ:
ಬಂದ್ ನಿಮಿತ್ತ ಚಿಕ್ಕೋಡಿಯಲ್ಲಿ ಪ್ರತಿಭಟನಾಕಾರರು ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ರು. ನಗರದ ಆರ್.ಡಿ.ಪ್ರೌಢ ಶಾಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಿದ ಕಾರ್ಮಿಕರು ರ‍್ಯಾಲಿ ಮಾಡಲು ಮುಂದಾಗಿದ್ದರು. ಈ ವೇಳೆ ಪೊಲೀಸರು ಅವರನ್ನು ತಡೆದರು. ಪೊಲೀಸರ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿದ ಕಾರ್ಮಿಕ ಸಂಘಟನೆಗಳು ಸಭೆ ನಡೆಸಿದವು. ಬಳಿಕ ಸ್ಥಳಕ್ಕೆ ತಹಶೀಲ್ದಾರ್ ಆಗಮಿಸಿ ಮನವಿ ಸ್ವೀಕರಿಸಿದರು.
ಇನ್ನು ಚಿಕ್ಕೋಡಿ, ಅಥಣಿ, ರಾಯಬಾಗ ಹಾಗೂ ಹುಕ್ಕೇರಿ ತಾಲೂಕುಗಳಲ್ಲಿ ಭಾರತ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಭಾರತ ಬಂದ್ನಿಂದ ಅಥಣಿಯಲ್ಲಿ ಯಾವುದೇ ಎಫೆಕ್ಟ್ ಆಗಿಲ್ಲ:
ಅಥಣಿಯಲ್ಲಿ ಭಾರತ್ ಬಂದ್ ಯಾವುದೇ ಪರಿಣಾಮ ಬೀರಿಲ್ಲ. ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಬಿಟ್ಟರೆ ಪಟ್ಟಣದಲ್ಲಿ ಜನಸಾಮಾನ್ಯರು ದಿನನಿತ್ಯದ ಕೆಲಸದಲ್ಲಿ ನಿರತರಾಗಿದ್ದರು.