ಹುಕ್ಕೇರಿ : ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿಗಳ ಕಸ ವಿಲೇವಾರಿ ವಾಹನಗಳಿಗೆ ಅರಣ್ಯ ಹಾಗೂ ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಚಾಲನೆ ನೀಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಉಮೇಶ್ ಕತ್ತಿ, 54 ಪಂಚಾಯಿತಿಗಳಿಗೆ ಕಸ ವಿಲೇಮಾರಿ ವಾಹನ ನೀಡಲಾಗುತ್ತಿದೆ. ಇದನ್ನ ಹುಕ್ಕೇರಿ ತಾಲೂಕಿನ ಜನ ಸದುಪಯೋಗ ಪಡಿಸಿಕೊಳ್ಳಬೇಕು. ಹುಕ್ಕೇರಿ ತಾಲೂಕು ಸ್ವಚ್ಛ ತಾಲೂಕು ಮಾಡಲು ಸಾರ್ವಜನಿಕರು ಸಹಕರಿಸಿದರೆ ಹುಕ್ಕೇರಿ ತಾಲೂಕು ನಂದನವನ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿ ಕಸವಿಲೆವಾರಿ ವಾಹನಗಳು ಮಹಿಳಾ ಸ್ವ ಸಹಾಯ ಸಂಘದವರ ಅಡಿ ಕಾರ್ಯನಿರ್ವಹಿಸಲಿದ್ದು, ಮಹಿಳಾ ಸ್ವಸಹಾಯ ಸಂಘದಿಂದ ವಾಹನ ಚಾಲಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಜೆ.ಜೆ.ಎಂ ಯೋಜನೆ ಅಡಿ ಹುಕ್ಕೇರಿ ತಾಲೂಕಿನ ಪ್ರತಿ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಕೊಡುವ ಯೋಜನೆ ಜಾರಿಯಲ್ಲಿದೆ. ಶೀಘ್ರದಲ್ಲಿ ಹುಕ್ಕೇರಿ ಕ್ಷೇತ್ರದ ಪ್ರತಿ ಗ್ರಾಮಗಳಿಗೆ 24 ಗಂಟೆ ಕುಡಿಯುವ ನೀರು ದೊರೆಯಲಿದೆ. ಜನರಿಗೆ ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛ ವಾತಾವರಣ ಕಲ್ಪಿಸುವುದು ನಮ್ಮ ಗುರಿ ಇದೆ ಎಂದರು.
ಓದಿ: 'ಭಾರತದಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯ': ವಿಶ್ವ ಆರ್ಥಿಕ ವೇದಿಕೆ ಉದ್ದೇಶಿಸಿ ಮೋದಿ ಭಾಷಣ
ನಾನು ಹುಕ್ಕೇರಿ ಭಾಗದ ಶಾಸಕನಾಗಿ ಕ್ಷೇತ್ರದ ಚಿತ್ರಣ ಬದಲು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದರೆ ಹುಕ್ಕೇರಿ ಮಾದರಿ ವಿಧಾನಸಭಾ ಕ್ಷೇತ್ರ ಆಗುವುದ್ರಲ್ಲಿ ಯಾವುದೇ ಸಂಶಯ ಇಲ್ಲ ಎಂದರು.
ಲಾಕ್ಡೌನ್ ಮಾಡದೇ ಇದ್ರೆ ಸ್ವಾಗತಾರ್ಹ. ಆದ್ರೆ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಕೊರೊನಾ ಮುನ್ನೆಚ್ಚರಿಕೆ ಪಾಲಿಸಿದರೆ ಲಾಕ್ಡೌನ್ ಅವಶ್ಯಕತೆ ಇಲ್ಲ. ನೂರಾರು ಜನ ಸೇರಿ ಜಾತ್ರೆ, ಹಬ್ಬ ಮಾಡುವುದನ್ನು ನಿಲ್ಲಿಸಬೇಕು. ಮಾಸ್ಕ್, ಸ್ಯಾನಿಟೈಸರ್ ಬಳಸಿ ಮುಂಜಾಗ್ರತೆಯಿಂದ ರಾಜ್ಯದ ಜನ ಇದ್ರೆ ಸರ್ಕಾರಕ್ಕೆ ಲಾಕ್ಡೌನ್ ಮಾಡುವ ಅವಶ್ಯಕತೆ ಬರುವುದಿಲ್ಲ ಎಂದು ಸಚಿವ ಉಮೇಶ್ ಕತ್ತಿಯವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಹುಕ್ಕೇರಿ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ತಹಶೀಲ್ದಾರರು ಸೇರಿದಂತೆ ತಾಲೂಕು ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.