ಬೆಳಗಾವಿ: ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ “ರಾಷ್ಟ್ರೀಯ ಪೋಷಣ್ ಅಭಿಯಾನ” ಕಾರ್ಯಕ್ರಮವನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ 15ಕ್ಕೂ ಹೆಚ್ಚು ಗರ್ಭಿಣಿಯರಿಗೆ ಉಡಿ ತುಂಬಿ ಬಳಿಕ ಮಾತಾನಾಡಿದ ಸಚಿವೆ ಶಶಿಕಲಾ ಜೊಲ್ಲೆ, ಗರ್ಭಾವಸ್ಥೆಯಲ್ಲಿ 9 ತಿಂಗಳ ಕಾಲ ಕಟ್ಟುನಿಟ್ಟಾಗಿ ಶುದ್ಧ ಹಾಗೂ ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಅದಕ್ಕಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಪೋಷಣ್ ಅಡಿಯಲ್ಲಿ 6 ಸಾವಿರ ರೂಗಳನ್ನು ಪೌಷ್ಟಿಕ ಆಹಾರ ಸೇವಿಸಲು ನೀಡುತ್ತಿದೆ. ಎಲ್ಲ ಗರ್ಭಧಾರಣೆ ಮಾಡಿದ ಮಹಿಳೆಯರು ಈ ಯೋಜನೆಯ ಲಾಭ ಪಡೆಯಬೇಕು. ಭವಿಷ್ಯದ ಪೀಳಿಗೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ನಿಮ್ಮ ಜವಾಬ್ದಾರಿಯೂ ಸಹ ಅಷ್ಟೇ ಇದೆ ಎಂದರು.
ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಗರ್ಭಿಣಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಶ್ರೇಯಸ್ ಪಾಟೀಲ್ ಎಂಬ ಅಂಗನವಾಡಿ ಬಾಲಕನ ಹುಟ್ಟುಹಬ್ಬ ಆಚರಿಸಲಾಯಿತು. ಗರ್ಭಿಣಿಯರ ಉಡಿ ತುಂಬಿದ ಶಶಿಕಲಾ ಜೊಲ್ಲೆ ಬಾಲಕನನ್ನು ಎತ್ತಿಕೊಳ್ಳುವ ಮೂಲಕ ಅಭಿನಂದಿಸಿದರು.