ಬೆಳಗಾವಿ: ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರ ಆಶೀರ್ವಾದದಿಂದಲೇ ನಾನು ಸಚಿವನಾದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ದೆಹಲಿಯಲ್ಲಿ ಫಡ್ನವಿಸ್ ಅವರ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಗೋಕಾಕ ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಫೆಬ್ರವರಿ 6ರಂದು ನಾನು ಮಂತ್ರಿಯಾದ ತಕ್ಷಣವೇ ಫಡ್ನವಿಸ್ ಅವರನ್ನು ಭೇಟಿಯಾಗಬೇಕಿತ್ತು. ಕೊರೊನಾ ಕಾರಣಕ್ಕೆ ನನ್ನ ಅವರ ಭೇಟಿ ಸಾಧ್ಯವಾಗಿರಲಿಲ್ಲ. ದೆಹಲಿಯಲ್ಲಿ ಭೇಟಿಯಾದಾಗ ಕೃತಜ್ಞತೆ ಸಲ್ಲಿಸಿದ್ದು, ಇದು ಸೌಜನ್ಯಯುತ ಭೇಟಿಯಷ್ಟೆ. ನಾನು ಸಚಿವನಾಗಲು ದೇವೇಂದ್ರ ಫಡ್ನವಿಸ್ ಅವರ ಪ್ರಮುಖ ಆಶೀರ್ವಾದವಿದೆ. ಹೀಗಾಗಿ ಧನ್ಯವಾದ ಹೇಳಲು ದೇವೇಂದ್ರ ಫಡ್ನವೀಸ್ ಭೇಟಿಯಾಗಿದ್ದೇನೆ ಎಂದರು.
ಉಮೇಶ್ ಕತ್ತಿ ಅವರು ನನ್ನ ಹಳೆಯ ಗೆಳೆಯ. ಅವರಿಗೆ ಮಂತ್ರಿ ಸ್ಥಾನ ಕೊಟ್ರೆ ಖುಷಿ ಪಡುತ್ತೇನೆ. ಎಂಟಿಬಿ, ವಿಶ್ವನಾಥ್, ಸಿಪಿ ಯೋಗೇಶ್ವರ್, ಆರ್. ಶಂಕರ್ ಎಲ್ಲರೂ ನನ್ನ ಗೆಳೆಯರೇ. ಎಲ್ಲರಿಗೂ ಮಂತ್ರಿ ಸ್ಥಾನ ಸಿಕ್ರೆ ಒಳ್ಳೆಯದೇ. ಆದ್ರೆ ಈ ತೀರ್ಮಾನ ಸಿಎಂ ಹಾಗೂ ಹೈಕಮಾಂಡ್ ನಾಯಕರು ತಗೆದುಕೊಳ್ಳುತ್ತಾರೆ ಎಂದರು.
ಇದಕ್ಕೂ ಮೊದಲು ಗೋಕಾಕ್‌ನಲ್ಲಿ ಪೌರಕಾರ್ಮಿಕರಿಗೆ ನಿರ್ಮಿಸಲಾದ ವಸತಿ ಸಮುಚ್ಛಯವನ್ನು ಸಚಿವರು ಉದ್ಘಾಟಿಸಿದರು. ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ G+2ಮಾದರಿಯಲ್ಲಿ ವಸತಿ ಸಮುಚ್ಛಯ ನಿರ್ಮಿಸಲಾಗಿದೆ.