ಬೆಳಗಾವಿ: ಅಂಡಮಾನ್ ಜೈಲಿಗೆ ಬರಲಿ ಎಂಬ ಬಿಜೆಪಿ ಮುಖಂಡ ಸಿ.ಟಿ.ರವಿ ಅವರ ಸವಾಲನ್ನು ಸಚಿವ ಪ್ರಿಯಾಂಕ್ ಖರ್ಗೆ ಸ್ವೀಕರಿಸಿದ್ದಾರೆ. ಸುವರ್ಣಸೌಧದಲ್ಲಿಂದು ಮಾತನಾಡಿದ ಅವರು, ಅವರು ಫಂಡ್ ಮಾಡ್ತಾರೆ ಅಂದ್ರೆ ನಾನು ಹೋಗೋಕೆ ರೆಡಿ. ಅಲ್ಲಿಗೆ ಕರೆದುಕೊಂಡು ಹೋಗಲಿ, ನಾನು ಹೋಗುತ್ತೇನೆ. ಅವರು ಬರಲಿಲ್ಲ ಅಂದರೆ ನಾನು ಹೋಗುತ್ತೇನೆ. ಬರಗಾಲ ಆದ ಮೇಲೆ ನಾನು ಹೋಗುವೆ. ಆದರೆ ಅದಕ್ಕೂ ಮುಂಚೆ ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲಿ ಎಂದರು.
ವೀರ ವಿನಾಯಕ ದಾಮೋದರ ಸಾವರ್ಕರ್ ಫೋಟೋ ವಿಚಾರವಾಗಿ ನನ್ನ ಹೇಳಿಕೆಗೆ ನಾನು ಬದ್ಧ. ನನ್ನ ಸಿದ್ಧಾಂತ ಸ್ಪಷ್ಟವಾಗಿದೆ. ನಾನು ಬಸವ ತತ್ವ, ನಾರಾಯಣ ಗುರು ಸಿದ್ಧಾಂತದಲ್ಲಿ ನಂಬಿಕೆ ಇಟ್ಟವನು. ಇತಿಹಾಸ ಅಲ್ಪಸ್ವಲ್ಪ ತಿಳಿದುಕೊಂಡಿದ್ದೇನೆ. ಸಾವರ್ಕರ್ ಅವರಿಗೆ ವೀರ್ ಬಿರುದು ಕೊಟ್ಟವರು ಯಾರು?. ಇಂಡಿಯಾ ಪಾಕಿಸ್ತಾನ ಪ್ರತ್ಯೇಕವಾಗಬೇಕು ಎಂದು ಮೊದಲು ಪ್ರಸ್ತಾವನೆ ಕೊಟ್ಟವರು ಯಾರು?. ಬ್ರಿಟೀಷರಿಂದ 60 ರೂ. ಪಿಂಚಣಿ ಪಡೆಯುತ್ತಿರಲಿಲ್ಲವಾ ಎಂಬ ಬಗ್ಗೆ ಬಿಜೆಪಿಯವರು ಉತ್ತರ ನೀಡಬೇಕು ಎಂದು ತಿಳಿಸಿದರು.
7ಡಿ ನಿಯಮ ವಾಪಸ್ ಪಡೆಯುವ SCPTSP ತಿದ್ದುಪಡಿ ವಿಧೇಯಕ ಬಗ್ಗೆ ಪ್ರತಿಕ್ರಿಯಿಸುತ್ತಾ, ಕಾಯ್ದೆಯಲ್ಲಿನ 7ಡಿ ವಾಪಸ್ ಪಡೆಯುತ್ತಿದ್ದೇವೆ. ಆ ಮೂಲಕ SCPTSP ಹಣವನ್ನು ಬೇರೆಯದಕ್ಕೆ ಬಳಸುವಂತಿಲ್ಲ. ಯೋಜನೆಯ ಹಣ ಆ ವರ್ಗಕ್ಕೇ ಉಪಯೋಗವಾಗಬೇಕು. ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ. ಹಾಗಾಗಿ ಈ ತಿದ್ದುಪಡಿ ವಿಧೇಯಕವನ್ನು ತಂದಿದ್ದೇವೆ. ಯಾವುದೇ ಯೋಜನೆಗಳ ಫಲಾನುಭವಿಗಳು ಎಸ್ಸಿ, ಎಸ್ಟಿ ಸಮುದಾಯದವರಾಗಬೇಕು ಎಂದು ಖರ್ಗೆ ಹೇಳಿದರು.
ರಾಹುಲ್ ಗಾಂಧಿ ತುಮಕೂರಿನಲ್ಲಿ ಸ್ಪರ್ಧಿಸಬೇಕು ಎಂಬ ಟಿ.ಬಿ ಜಯಚಂದ್ರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ರಾಹುಲ್ ಗಾಂಧಿ ನಮ್ಮ ನಾಯಕರು. ಅವರು ಅಮೇಥಿಯಲ್ಲೂ ನಿಲ್ಲಬಹುದು, ವಯನಾಡಿನಲ್ಲಾದರೂ ನಿಲ್ಲಬಹುದು. ತುಮಕೂರಿನಲ್ಲೂ ನಿಲ್ಲಬಹುದು. ನಮ್ಮ ನಾಯಕರಿಗೆ ಸಂಸತ್ನಲ್ಲಿ ಗಟ್ಟಿ ದನಿಯಲ್ಲಿ ಮಾತನಾಡಬೇಕು ಎಂದರು.
ಆ ಬಗ್ಗೆ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರು ಕರ್ನಾಟಕಕ್ಕೆ ಬಂದರೆ ಪಕ್ಷಕ್ಕೆ ಹೆಚ್ಚು ಬಲ ಬರುತ್ತದೆ. ಭಾರತ್ ಜೋಡೋ ಮಾಡಿ ಅವರಿಗೆ ಉತ್ತಮ ಬೆಂಬಲ ಸಿಕ್ತು. ಕಲಬುರ್ಗಿ ಮೀಸಲು ಕ್ಷೇತ್ರವಾಗಿಲ್ಲದಿದ್ದರೆ ಅಲ್ಲಿಗೇ ಕರೆಯುತ್ತಿದ್ದೆವು. ಅದರಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.
ಮಣಿಕಂಠ ರಾಥೋಡ್ ಅರೆಸ್ಟ್ ವಿಚಾರವಾಗಿ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸುತ್ತಾ, ಎರಡು ಕೇಸ್ ನಲ್ಲಿ ಅವರ ಮೇಲೆ ವಾರೆಂಟ್ ಇತ್ತು. ಪ್ರಿವೆಂಟಿವ್ ಅರೆಸ್ಟ್ ಮಾಡಿದ್ದಾರೆ. ಅದಕ್ಕೂ ನನಗೂ ಸಂಬಂಧವಿಲ್ಲ. ಕಾನೂನು ಪ್ರಕಾರ ಮಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಸುವರ್ಣಸೌಧದಿಂದ ಸಾವರ್ಕರ್ ಫೋಟೋ ತೆಗೆದರೆ ಸೂಕ್ತ, ನನಗೆ ಬಿಟ್ಟರೆ ಇವತ್ತೇ ತೆರವು ಮಾಡುವೆ: ಪ್ರಿಯಾಂಕ್ ಖರ್ಗೆ