ಬೆಳಗಾವಿ: ಅಧಿಕಾರಕ್ಕೇರಲು ಜನರನ್ನು ಪ್ರಚೋದಿಸುವುದು ಶಿವಸೇನೆಯ ಅಜೆಂಡಾವಾಗಿದೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವರ್ತನೆಯನ್ನು ಸಚಿವ ರಮೇಶ್ ಜಾರಕಿಹೊಳಿ ಖಂಡಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಸರ್ಕಾರದಿಂದ ಯಾವ ಅಭಿವೃದ್ಧಿ ಕಾರ್ಯವೂ ಆಗುತ್ತಿಲ್ಲ. ಶಿವಸೇನೆ ಜನಪ್ರಿಯತೆ ಕುಗ್ಗುತ್ತಿದೆ. ಹೀಗಾಗಿ ಗಡಿ ವಿವಾದ ಕೆದಕಿ ಅಲ್ಲಿನ ಜನರನ್ನು ಸೆಳೆಯಲು ಠಾಕ್ರೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಆದರೆ ನಾವು ಎಲ್ಲ ಭಾಷಿಕರು, ಧರ್ಮಿಯರ ಹೃದಯ ಗೆಲ್ಲುತ್ತಿದ್ದೇವೆ. ನಮ್ಮಲ್ಲಿ ಭೇದ- ಭಾವ, ದ್ವೇಷ ಇಲ್ಲ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಎಲ್ಲಾ ಹಂತದಲ್ಲಿ ಫೇಲ್ ಆಗಿದ್ದಾರೆ. ಹೀಗಾಗಿ ಗಡಿ ವಿಷಯವನ್ನೇ ವಿವಾದ ಮಾಡಿ ಭಾವನಾತ್ಮಕವಾಗಿ ಅಲ್ಲಿನ ಜನರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಹೀಗಾಗಿ ಅವರ ಹೇಳಿಕೆಗೆ ಮಹತ್ವ ಕೊಡಬೇಡಿ. ಈಗಾಗಲೇ ಮಹಾಜನ ವರದಿ ಒಪ್ಪಿ ಆಗಿದೆ, ಅದರ ಬಗ್ಗೆ ಚರ್ಚೆ ಬೇಡ ಎಂದರು.
ಕರ್ನಾಟಕದಲ್ಲೂ ಗಡಿ ಉಸ್ತುವಾರಿ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದ ಹಿತ, ಗಡಿ ಕಾಯಲು 34 ಜನ ಸಚಿವರು ಸಮರ್ಥರಿದ್ದೇವೆ. ಕರ್ನಾಟಕದಲ್ಲಿ ಗಡಿ ಉಸ್ತುವಾರಿ ಸಚಿವರ ನೇಮಕ ಅವಶ್ಯಕತೆ ಇಲ್ಲ. ಬೆಳಗಾವಿ ಅಷ್ಟೇ ಅಲ್ಲ, ಎಲ್ಲ ಗಡಿ ವಿಚಾರ ಕಾಪಾಡಲು ನಾವು ಬದ್ಧರಿದ್ದೇವೆ. ನಮ್ಮ ಸಿಎಂ ಬಿಎಸ್‌ವೈ ಸಮರ್ಥರಿದ್ದಾರೆ ಎಂದು ಹೇಳಿದರು.
ಮಹಾರಾಷ್ಟ್ರ ಸರ್ಕಾರ ವಿವಾದಾತ್ಮಕ ಪುಸ್ತಕ ಬಿಡುಗಡೆ ಕುರಿತು ಮಾತನಾಡಿದ ಸಚಿವ ಜಾರಕಿಹೊಳಿ, ಇದಕ್ಕೆ ಮಹತ್ವ ಕೊಡೋದು ಬೇಡ. ನಮ್ಮದು ಅಭಿವೃದ್ಧಿ ಅಜೆಂಡಾ, ಶಿವಸೇನೆಯದ್ದು ಪ್ರಚೋದಿಸುವ ಅಜೆಂಡಾ. ಕೇಂದ್ರ ಮಟ್ಟದಲ್ಲಿ ನಮ್ಮ ವಾದ ಮಂಡನೆಗೆ ಸಮರ್ಥರಿದ್ದೇವೆ. ನೀವೇನೂ ಚಿಂತೆ ಮಾಡಬೇಡಿ, ನಿಮ್ಮ ಕಳಕಳಿ ಬಗ್ಗೆ ಗೊತ್ತಾಗುತ್ತೆ.
ಎಂಇಎಸ್ ಮಾಜಿ ಶಾಸಕ ಸಹ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಪ್ರತಿಕ್ರಿಯಿಸಿದ ಜಾರಕಿಹೊಳಿ, ಗಡಿ ವಿವಾದ ಕೆದಕುವುದೇ ಎಂಇಎಸ್ ತಂತ್ರ. ಅದಕ್ಕೆ ಮಹತ್ವ ಕೊಡಬೇಡಿ ಅಂದ್ರು.
ಅರವಿಂದ ಪಾಟೀಲ್ ಬಿಜೆಪಿಗೆ ಬರಬಹುದು ಎಂದು ನೀವೇ ಹೇಳಿದ್ದಿರಲ್ಲ ಎಂಬ ಪ್ರಶ್ನೆಗೆ, ಬಿಜೆಪಿಗೆ ಬಂದ್ರೆ ಸ್ವಾಗತಿಸುವೆ ಅಂತ ಆಗ ಹೇಳಿದ್ದೆ. ಬಂದಾಗ ನೋಡೋಣ ಎಂದರು.
ಇದನ್ನೂ ಓದಿ:ನಾವೇನು ಕೈಕಟ್ಟಿ ಕುಳಿತಿಲ್ಲ.. ಮಹಾರಾಷ್ಟ್ರ ಸಿಎಂ ಠಾಕ್ರೆಗೆ ಸಚಿವೆ ಜೊಲ್ಲೆ ಖಡಕ್ ಎಚ್ಚರಿಕೆ