ಬೆಳಗಾವಿ: ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಪಡಿಸುವ ಬಗ್ಗೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಹೇಳಿದ್ದೇವೆ. ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹೊಸ ಶಿಕ್ಷಣ ನೀತಿ ಕಿತ್ತೆಸೆದು, ರಾಜ್ಯ ಶಿಕ್ಷಣ ನೀತಿ ಜಾರಿಗೆ ತರುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ. ಬೆಳಗಾವಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡು ವರ್ಷದ ಹಿಂದೆ ನಮ್ಮ ರಾಜ್ಯದಲ್ಲಿ ಮಾತ್ರ ಹೊಸ ಶಿಕ್ಷಣ ನೀತಿ ಅನುಷ್ಠಾನಕ್ಕೆ ತರಲಾಗಿದೆ. ಅದಕ್ಕೆ ಬಹಳಷ್ಟು ಪೂರ್ವ ತಯಾರಿ ಆಗಬೇಕಿತ್ತು ಮತ್ತು ಅದರಲ್ಲಿ ಕೆಲ ನ್ಯೂನತೆಗಳಿವೆ ಎಂದರು.
ಈ ಎಲ್ಲ ವಿಚಾರಗಳ ಬಗ್ಗೆ ವಿವರವಾಗಿ ಶಿಕ್ಷಣ ತಜ್ಞರ ಜೊತೆಗೆ ಚರ್ಚಿಸುತ್ತಿದ್ದೇವೆ. ಯಾವುದೇ ರೀತಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಆಗದಂತೆ, ಯಾವ ರೀತಿಯಲ್ಲಿ ಬದಲಾವಣೆ ತರಬೇಕೆಂದು ಬಹಳಷ್ಟು ಗಮನಹರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಒಂದು ಸ್ಪಷ್ಟವಾದ ರೂಪವನ್ನು ಕೊಟ್ಟು ಬದಲಾವಣೆ ಪ್ರಕ್ರಿಯೆ ಪ್ರಾರಂಭ ಮಾಡುತ್ತೇವೆ ಎಂದರು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ನ್ಯೂನತೆಗಳು ಏನೇನಿವೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಶಿಕ್ಷಣ ನೀತಿಯಲ್ಲಿ ಬೇರೆ ಬೇರೆ ಅವಿಷ್ಕಾರಗಳಿವೆ ಎಂದು ತಿಳಿಸಿದರು.
ಮುಂದುವರೆದು, ಎರಡು ಮುಖ್ಯ ವಿಷಯಗಳನ್ನು ತೆಗೆದುಕೊಳ್ಳುವುದು, ಮತ್ತೊಂದು ಎಲೆಕ್ಟಿವ್ ವಿಷಯ ತೆಗೆದುಕೊಳ್ಳುವುದು. ಥೇರಿಯಾಟಿಕಲ್ಗಿಂತ ಪ್ರಾಕ್ಟಿಕಲ್ ಜ್ಞಾನ ಕೌಶಲ್ಯಭಿವೃದ್ಧಿ ವಿಚಾರ ಸೇರಿ ಬಹಳಷ್ಟು ವಿಚಾರಗಳು ಒಳಗೊಂಡಿವೆ. ಯಾವುದೇ ನೀತಿ ಜಾರಿಗೆ ತರಬೇಕಾದರೆ ಮೂಲಭೂತ ಸೌಲಭ್ಯಗಳು ಇರಬೇಕು. ಅದಕ್ಕೆ ಬೇಕಾದ ಬೋಧಕ, ಬೋಧಕೇತರ ಸಿಬ್ಬಂದಿಗಳ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕೆ ಅನುದಾನ ಒದಗಿಸುವ ಬಗ್ಗೆ ತಯಾರಿ ಮಾಡಬೇಕಾಗುತ್ತದೆ. ಇನ್ನು ಖಾಸಗಿ ಸಂಸ್ಥೆಗಳಲ್ಲಿ ಒಂದು ರೀತಿ ಆದರೆ ಸರ್ಕಾರಿ ಸಂಸ್ಥೆಗಳಲ್ಲಿ ಮತ್ತೊಂದು ರೀತಿ ಆಗುತ್ತದೆ. ಈ ಎಲ್ಲಾ ವಿಚಾರಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುತ್ತೇವೆ ಎಂದು ಹೇಳಿದರು.
ಹಂತ ಹಂತವಾಗಿ ಯಾವುದೇ ಒಂದು ನೀತಿಯಲ್ಲಿ ಬದಲಾವಣೆ ತರಬೇಕಾಗುತ್ತದೆ. ಆದರೆ ಏಕಾಏಕಿ 2021ರಲ್ಲಿ ಅನುಷ್ಠಾನಕ್ಕೆ ತರುವ ಕೆಲಸ ಆಗಿದೆ. ಒಂದೆರಡಲ್ಲ ಇದರಲ್ಲಿ ಇರುವ ಬಹಳಷ್ಟು ವಿಚಾರಗಳ ಬಗ್ಗೆ ಎಲ್ಲರ ಜೊತೆಗೂ ಚರ್ಚಿಸಿ ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದೇವೆ. ಸಮಗ್ರವಾಗಿ ಎಲ್ಲ ಜಾತಿ, ವರ್ಗಗಳ ಹಿತ ಮತ್ತು ಉದ್ಯೋಗ ಸೃಷ್ಟಿಯನ್ನು ಒಳಗೊಂಡ ರಾಜ್ಯ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು.
ಅಕ್ಕಿ ಬದಲು ಹಣ ಕೊಡುತ್ತಿರುವ ಕುರಿತ ಟೀಕೆ ಬಗ್ಗೆ ಪ್ರತಿಕ್ರಿಯಿಸಿ, ಯಾವುದೇ ವ್ಯವಸ್ಥೆಯಲ್ಲಿ ಅವರ ಅಭಿಪ್ರಾಯಗಳನ್ನು ಹೇಳಲು ಅವಕಾಶವಿದೆ. ಕೇಂದ್ರ ಸರ್ಕಾರ ನಮ್ಮ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸುವ ಕೆಲಸ ಮಾಡಿದೆ. ಆ ಕಾರಣದಿಂದ ನಮ್ಮ ಸರ್ಕಾರ, ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ಯೋಜನೆಗಳನ್ನು ಜನರಿಗೆ ಮುಟ್ಟಿಸಬೇಕು ಎಂಬ ಉದ್ದೇಶದಿಂದ ನೇರವಾಗಿ ಹಣ ಕೊಡುತ್ತಿದ್ದೇವೆ. ಬಹುತೇಕ ಜನ ಇದನ್ನು ಸ್ವಾಗತ ಮಾಡಿದ್ದಾರೆ ಎಂದರು.
ಇದನ್ನೂ ಓದಿ: 'ಇತಿಹಾಸ ತಿರುಚುವ ಪ್ರಯತ್ನ ಬೇಡ': ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ ಸತೀಶ್ ಜಾರಕಿಹೊಳಿ ಹೇಳಿಕೆ