ಬೆಳಗಾವಿ: ಕೆಟ್ಟ ಮೇಲೆ ಬುದ್ಧಿ ಬಂತು, ಅಟ್ಟ ಮೇಲೆ ಒಲೆ ಉರಿಯಿತು ಎಂಬ ಗಾದೆ ಮಾತು ಇದೆ. ಅಡುಗೆ ಹಾಳು ಮಾಡಿದ ಮೇಲೆ ಒಲೆ ಉರಿದರೆ, ಕೆಟ್ಟ ಮೇಲೆ ಬುದ್ದಿ ಬಂದರೆ ಎಲ್ಲವೂ ಆಗಿ ಹೋಗಿರುತ್ತೆ. ಈ ಕೆಟ್ಟ ಅನುಭವದ ಮೇಲೆ ಇನ್ನೆಂದೂ ಕಾಂಗ್ರೆಸ್ ಸಹವಾಸ ಮಾಡಬೇಡಿ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಸಚಿವ ಸಿ.ಟಿ.ರವಿ ಸಲಹೆ ನೀಡಿದರು.
ಕಾಂಗ್ರೆಸ್ ಸಹವಾಸ ಮಾಡಿ 12 ವರ್ಷ ಸಂಪಾದನೆ ಮಾಡಿದ್ದ ಗೌರವ ಹಾಳುಮಾಡಿಕೊಂಡೆ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ಉರಿಯುವ ಮನೆ ಅಂತ ಬಹಳ ದಿನಗಳ ಹಿಂದೆ ಅಂಬೇಡ್ಕರ್ ಹೇಳಿದ್ದಾರೆ. ಕೆಟ್ಟ ಮೇಲೆಯಾದರೂ ನಿಮಗೆ ಬುದ್ಧಿ ಬಂದಿದೆ. ಇನ್ನು ಮೇಲೆ ಎಂದಿಗೂ ಅವರ ಸಹವಾಸ ಮಾಡಬೇಡಿ. ನಿಮ್ಮವರಿಗೂ ಹೇಳಿ. ಈ ನಿಲುವು ಸದಾಕಾಲ ಇರಲಿ. ಚಂಚಲ ಮನಸ್ಥಿತಿಗೊಳಗಾಗಲ್ಲ ಅಂದುಕೊಂಡಿದ್ದೀನಿ. ನಮ್ಮದು ರಾಷ್ಟ್ರವಾದಿ ಪಕ್ಷ, ಯಾರ ಬಗ್ಗೆಯೂ ಪೂರ್ವಾಗ್ರಹ ಅತಿಪ್ರೇಮ ಇಲ್ಲ. ದೇಶದ ಪರವಾಗಿ ಕೆಲಸ ಮಾಡುತ್ತೇವೆ. ಭಾರತ ಮಾತಾ ಕಿ ಜೈ ಎಂದು ನಮ್ಮ ಜತೆ ಬಂದರೆ ಎಲ್ಲರೂ ನಮ್ಮವರೇ ಎಂದರು.
ಓದಿ: ಹೆಚ್ಡಿಕೆಗೆ ಕರೆ ಮಾಡಿದ್ರಂತೆ ತೆಲಂಗಾಣ ಸಿಎಂ: ಮರು ಜೀವ ಪಡೆಯಲಿದೆಯಾ ತೃತೀಯ ರಂಗ?
ಭಾರತದಲ್ಲಿ ರೈತರ ಬೆಳೆಗೆ ಅತಿ ಹೆಚ್ಚು ದರ ನೀಡಿದ್ದು ಬಿಜೆಪಿ. ಕಿಸಾನ್ ಸಮ್ಮಾನ್ ಯೋಜನೆ ಕೊಟ್ಟಿದ್ದು ಬಿಜೆಪಿ. ಬಿಜೆಪಿ ರೈತರ ಜತೆ ಹಿಂದೆಯೂ ಇದೆ. ಮುಂದೆಯೂ ರೈತರ ಜತೆ ಇರುತ್ತೆ. ನಾನು ರೈತನ ಮಗ. ಕೃಷಿ ಕಾಯ್ದೆಯನ್ನು ವಿರೊಧಿಸುವವರು ಕಾಯ್ದೆಯನ್ನ ಸರಿಯಾಗಿ ತಿಳಿದುಕೊಳ್ಳಲಿ ಎಂದರು.
ಯಡಿಯೂರಪ್ಪ ಅಸಮರ್ಥ ಸಿಎಂ ಎಂಬ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, ಇತ್ತೀಚೆಗೆ ಸಿದ್ದರಾಮಯ್ಯ ವಿಚಿತ್ರ ವಿಚಿತ್ರವಾಗಿ ಮಾತನಾಡೋದನ್ನು ಕೇಳ್ತಿದ್ದೀವಿ. ನನಗನಿಸಿದಂತೆ ಸಿದ್ದರಾಮಯ್ಯ ಮನೆತನದವರು ಗೋ ಸೇವೆ ಮಾಡಿದವರು. ಗೋಹತ್ಯೆ ಸಮರ್ಥಿಸಿದವರಲ್ಲ. ಆದರೆ, ಸಿದ್ದರಾಮಯ್ಯ ಗೋ ಹತ್ಯೆ ಸಮರ್ಥಿಸುತ್ತಿದ್ದಾರೆ. ವೈಚಾರಿಕವಾಗಿ ಯಾವುದೋ ಸ್ವಲ್ಪ ಕ್ರಾಸ್ ಆದ ಹಾಗಿದೆ. ಡಿಎನ್ಎ ಅನ್ಕೋಬೇಡಿ ನಾನು ಡಿಎನ್ಎ ಮಟ್ಟಕ್ಕೆ ಹೋಗಲ್ಲ. ವೈಚಾರಿಕವಾಗಿ ಕ್ರಾಸ್ ಆದಾಗ ಮೂಲ ಸಂಸ್ಕೃತಿ ಎಡಬಿಡಂಗಿ ತರಹ ಆಗಿಬಿಡುತ್ತೆ. ಅವರ ಲೀಡರ್‌ಶಿಪ್ ಸಹ ಕ್ರಾಸ್ ಬ್ರೀಡ್. ನಮ್ಮ ದೇಶದ ಬೌಂಡರಿ ಕ್ರಾಸ್ ಮಾಡಿ ಬ್ರೀಡ್ ಆಗಿ ಬಿಟ್ಟಿದೆ. ಅದರಿಂದಾಗಿ ಅವರಿಗೆ ಕ್ರಾಸ್ ಬ್ರೀಡ್ ಬಗ್ಗೆ ಸಮರ್ಥನೆ ಮಾಡುವ ಅನಿವಾರ್ಯತೆ ಆಗಿದೆ ಎಂದು ತಿರುಗೇಟು ನೀಡಿದರು.
ಓದಿ:'ಲವ್ ಜಿಹಾದ್ ತಡೆ, ಗೋ ಹತ್ಯೆ ನಿಷೇಧ ಕಾನೂನು ಜಾರಿ ಮಾಡೇ ಮಾಡ್ತೀವಿ'- ಸವದಿ