ಬೆಳಗಾವಿ: ಇಲ್ಲಿನ ಸುವರ್ಣಸೌಧದಲ್ಲಿ ಡಿಸೆಂಬರ್ 19 ರಿಂದ ಚಳಿಗಾಲದ ವಿಧಾನಮಂಡಳ ಅಧಿವೇಶನ ಆರಂಭವಾಗಲಿದ್ದು, ಅದೇ ದಿನ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಳಗಾವಿಯಲ್ಲಿ ಮಹಾಮೇಳಾವ್ (ಮರಾಠಿಗರ ಸಮ್ಮೇಳನ) ಆಯೋಜಿಸಲು ಸಿದ್ಧತೆ ನಡೆಸುತ್ತಿದೆ.
ನಗರದ ಟಿಳಕವಾಡಿಯಲ್ಲಿರುವ ವ್ಯಾಕ್ಸಿನ್ ಡಿಪೊ ಮೈದಾನಲ್ಲಿ ಮಹಾಮೇಳಾವ್ ನಡೆಸಲು ಅನುಮತಿ ಕೋರಿ ಬೆಳಗಾವಿ ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಎಂಇಎಸ್ ಮನವಿ ಸಲ್ಲಿಸಿದೆ.
ಕರ್ನಾಟಕ - ಮಹಾರಾಷ್ಟ್ರ ಗಡಿವಿವಾದ ಪ್ರಕರಣದ ವಿಚಾರಣೆಯು ಇಷ್ಟರಲ್ಲೇ ಸುಪ್ರೀಂ ಕೋರ್ಟ್ನಲ್ಲಿ ಪ್ರಾರಂಭವಾಗಲಿದ್ದು, ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಬೆಳಗಾವಿ ಗಡಿಯಲ್ಲಿ ಒಂದೆರಡು ದಿನಗಳ ಹಿಂದೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ ಗಳಿಗೆ ಮಸಿ ಬಳಿದಿದ್ದು ಹಾಗೂ ಕರ್ನಾಟಕದಲ್ಲಿ ಮಹಾರಾಷ್ಟ್ರ ವಾಹನಗಳನ್ನು ಜಖಂಗೊಳಿಸಿದ ಪ್ರಕರಣಗಳು ನಡೆದಿವೆ.
ಪರಿಸ್ಥಿತಿ ಹೀಗಿರುವಾಗ ವಿದಾನ ಸಭಾ ಅಧಿವೇಶನದ ದಿನವೇ ಮಹಾಮೇಳಾವ್ ನಡೆಸುವ ಮೂಲಕ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದೆ ಎನ್ನಲಾಗಿದೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗಳು ಕೂಡ ಇನ್ನಾರು ತಿಂಗಳಲ್ಲಿ ನಡೆಯಲಿದ್ದು, ಅದಕ್ಕೂ ಮುನ್ನ ಎಂಇಎಸ್ ಮರಾಠಿ ಭಾಷಿಕರನ್ನು ತನ್ನ ಪರವಾಗಿ ಒಗ್ಗೂಡಿಸಲು ಈ ಕುತಂತ್ರಗಳನ್ನು ಮಾಡುತ್ತಿದೆ ಎಂದು ಹೇಳಲಾಗಿದೆ.
ಮಹಾಮೇಳಾವ್ಗೆ ಬರುವಂತೆ ಎಂಇಎಸ್ ಮಹಾರಾಷ್ಟ್ರದ ಪ್ರಮುಖ ನಾಯಕರಿಗೂ ಆಹ್ವಾನ ನೀಡಿದೆ ಎನ್ನಲಾಗಿದೆ. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಸೇರಿದಂತೆ ಬಿಜೆಪಿ, ಕಾಂಗ್ರೆಸ್, ಶಿವಸೇನೆಯ ಏಕನಾಥ್ ಶಿಂದೆ ಬಣ ಪಕ್ಷಗಳಿಗೆ ಎಂಇಎಸ್ ಆಮಂತ್ರಣ ನೀಡಿದ್ದು, ಒಂದು ಪಕ್ಷದಿಂದ ತಲಾ ಇಬ್ಬರು ನಾಯಕರನ್ನು ಕಳುಹಿಸುವಂತೆ ಕೋರಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಎನ್‌ಸಿಪಿ ವರಿಷ್ಠ ಶರದ್ ಪವಾರ್, ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ, ಶಂಭುರಾಜ್ ದೇಸಾಯಿ ಇವರಿಗೂ ಎಂಇಎಸ್ ಆಹ್ವಾನ ನೀಡಿದೆ ಎನ್ನಲಾಗಿದೆ.
ಇದನ್ನೂ ಓದಿ: ಚಿಕ್ಕೋಡಿ: ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ 200 ಬಸ್ಗಳ ಸಂಚಾರ ಮರು ಆರಂಭ