ಚಿಕ್ಕೋಡಿ: ಕಳೆದ ತಿಂಗಳು ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲವು ಪಡೆದವರು ಹಾಗೂ ಅವರ ಅಭಿಮಾನಿಗಳು ಗ್ರಾಮದ ಮುಖ್ಯ ರಸ್ತೆಗಳಿಗೆ ಕಟೌಟ್, ಫ್ಲೆಕ್ಸ್ ಹಾಕಿಸಿ ಅಭಿನಂದನೆ ಸಲ್ಲಿಸುವುದನ್ನು ನಾವು ನೋಡಿದ್ದೇವೆ. ಆದರೆ, ಕನ್ನಡ ನೆಲದಲ್ಲಿ ಮರಾಠಿ ಫ್ಲೆಕ್ಸ್ ಗಳನ್ನು ಹಾಕಿಸಿ, ಇಲ್ಲಿನ ಗ್ರಾಮಸ್ಥರು ಮರಾಠಿ ಪ್ರೇಮ ಮೆರದಿದ್ದು, ಇದಕ್ಕೆ ಕನ್ನಡ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಹಾಕಲಾಗಿರುವ ಪ್ರತಿಯೊಂದು ಫ್ಲೆಕ್ಸ್‌ಗಳಲ್ಲಿ ಮರಾಠಿ ಭಾಷೆಯನ್ನು ಬಳಸಿ ಶುಭಾಶಯ ಕೊರಲಾಗಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ. ಕೂಡಲೇ ಮರಾಠಿ ಫ್ಲೆಕ್ಸ್ ಗಳನ್ನು ತೆರವು ಗೊಳಿಸುವಂತೆ ಕನ್ನಡಪರ ಹೋರಾಟಗಾರ ಶ್ರೀಕಾಂತ ಅಸೂದೆ ಆಗ್ರಹಿಸಿದ್ದಾರೆ.
ಮಾಂಜರಿ ಗ್ರಾಮದ ಕೆಲವರು ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಕನ್ನಡ ಭಾಷೆ ಮರೆತು ಮರಾಠಿ ಭಾಷೆಯಲ್ಲಿ ಫ್ಲೆಕ್ಸ್ಗಳನ್ನು ಹಾಕಿದ್ದಾರೆ. ಇದು ಮಾಂಜರಿ ಗ್ರಾಮದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ. ಇಲ್ಲಿ ಕನ್ನಡಿಗರು ಮತ್ತು ಮರಾಠಿಗರು ಅಣ್ಣ - ತಮ್ಮಂದಿರಂತೆ ಬದುಕುತ್ತಿದ್ದಾರೆ. ಹೀಗಿದ್ದರೂ ಮರಾಠಿ ಭಾಷೆಯ ಫ್ಲೆಕ್ಸ್ಗಳನ್ನು ಹಾಕುವ ಮುಖಾಂತರ ಭಾಷೆ - ಭಾಷೆಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಕನ್ನಡಪರ ಹೋರಾಟಗಾರ ಶ್ರೀಕಾಂತ ಅಸೂದೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಓದಿ : ಹನುಮಾನ್ ಚಾಲೀಸ್ ಹೇಳಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆದ ಚಿಕ್ಕಮಗಳೂರಿನ ಬಾಲಕಿ