ಬೆಂಗಳೂರು/ಬೆಳಗಾವಿ: ಕೋವಿಡ್ ಬಗ್ಗೆ ಶನಿವಾರ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಯಲಿದ್ದು, ಬೆಂಗಳೂರು ಮತ್ತು ರಾಜ್ಯಕ್ಕೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಬೆಳಗಾವಿ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಕೋವಿಡ್ ಸಂಬಂಧ ಶನಿವಾರ ತುರ್ತು ಸಭೆ ಕರೆದಿದ್ದೇನೆ. ಕೋವಿಡ್ ತಡೆಯಲು ಆರೋಗ್ಯ, ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ಆರೋಗ್ಯ ಸಚಿವ ಡಾ.ಸುಧಾಕರ್ ಭಾಗಿಯಾಗಲಿದ್ದಾರೆ. ಕೋವಿಡ್ ಹೇಗೆ ತಡೆಯಬೇಕು, ಹೊಸವರ್ಷದ ಆಚರಣೆ ಸಂದರ್ಭದಲ್ಲಿ ಯಾವೆಲ್ಲಾ ನಿಯಮಗಳನ್ನು ಕೈಗೊಳ್ಳಬೇಕು ಎಂದು ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಕೋವಿಡ್ ನಿಯಮಾವಳಿ ಬಗ್ಗೆ ಕಾಂಗ್ರೆಸ್, ಜೆಡಿಎಸ್ ಆರೋಪ ವಿಚಾರವಾಗಿ ಮಾತನಾಡಿ, ಇಡೀ ಜಗತ್ತಿಗೆ ಕೋವಿಡ್ ಆವರಿಸಿದೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ರಾಹುಲ್ ಗಾಂಧಿಗೆ ಪ್ರತ್ಯೇಕವಾಗಿ ಕೋವಿಡ್ ಬರಲ್ಲ. ಹೆಚ್ಡಿಕೆ, ರಾಹುಲ್ ಗಾಂಧಿಗೆ ಪ್ರತ್ಯೇಕವಾಗಿ ಕೋವಿಡ್ ಬಂದರೆ, ಆಗ ಯೋಚನೆ ಮಾಡುತ್ತೇನೆ. ಈಗ ಜನರ ಪ್ರಾಣ ಉಳಿಸುವುದು ನಮ್ಮ ಆದ್ಯತೆ ಎಂದರು.
ಇದನ್ನೂ ಓದಿ: ಏನಿದು ಬಿಎಫ್ 7 ಕೋವಿಡ್ ವೆರಿಯಂಟ್? ತೀವ್ರತೆ ಎಷ್ಟು? ಇಲ್ಲಿದೆ ಮಾಹಿತಿ..!