ಬೆಳಗಾವಿ: ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತವನ್ನು ಪಡೆದು ಆಯ್ಕೆಯಾದ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬೆಳಗಾವಿ ಸಂಸದೆ ಮಂಗಳಾ ಅಂಗಡಿ ಹೇಳಿದರು. ನಗರದಲ್ಲಿಂದು 'ಈಟಿವಿ ಭಾರತ'ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ನಮಗೆ ಸೋಲಾಗಿರುವ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕಿದೆ. ಜನರು ಕೊಟ್ಟ ಸಂದೇಶಕ್ಕೆ ನಾವು ತಲೆ ಬಾಗಬೇಕಾಗುತ್ತದೆ ಎಂದರು.
ನಮ್ಮ ಸರ್ಕಾರದ ಯೋಜನೆಗಳು ಮನೆ ಮನೆಗೆ ತಲುಪಿಸಲು ಸಾಧ್ಯ ಆಗಲಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಮನ ಮುಟ್ಟುವಂತೆ ತಿಳಿಸುವ ಕೆಲಸ ಮಾಡುತ್ತೇವೆ. ನಮ್ಮ ಪಕ್ಷದ ಕಾರ್ಯಕರ್ತರು ಸಾಕಷ್ಟು ಶ್ರಮ ವಹಿಸಿದ್ದರು. ಮುಂದೆ ಇನ್ನೂ ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡಲಿದ್ದಾರೆ. ಜಿಲ್ಲೆಯಲ್ಲಿ ಆರಿಸಿ ಬಂದಿರುವ ನಮ್ಮ ಪಕ್ಷದ 7 ಶಾಸಕರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ದಿ. ಸುರೇಶ ಅಂಗಡಿಯವರ ಅನುಪಸ್ಥಿತಿ ಬಿಜೆಪಿ ಸೋಲಿಗೆ ಕಾರಣ ಆಯ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಒಂದು ಕಾರಣ ಆಗಿರಬಹುದು. ಬಹಳಷ್ಟು ಜನ ಕಾರ್ಯಕರ್ತರು ಸರ್ ಇದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ ಅಂತಾ ಹೇಳುತ್ತಿದ್ದರು. ಸರ್ ಇಲ್ಲದಿದ್ದರೂ ಅವರು ನಮ್ಮ ಜೊತೆ ಇದ್ದಾರೆ ಅಂತಾ ತಿಳಿದುಕೊಂಡೇ ಎಲ್ಲರೂ ಕೆಲಸ ಮಾಡಿದ್ದೆವು. ಕೇಂದ್ರ ಮತ್ತು ರಾಜ್ಯ ನಾಯಕರು ಬಂದು ಒಳ್ಳೆಯ ರೀತಿ ಪ್ರಚಾರ ಮಾಡಿದ್ದರು. ಆದರೂ ಸೋಲಾಗಿದೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದು ಮಂಗಳಾ ಅಂಗಡಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಮಂಗಳಾ ಅಂಗಡಿ ಅವರು, ಅದು ವೈಯಕ್ತಿಕ ವಿಷಯ. ಅದರ ಬಗ್ಗೆ ನಾನು ಹೆಚ್ಚಿಗೆ ಏನೂ ಹೇಳಲ್ಲ. ಅವರು ಗೆಲ್ಲುತ್ತಾರೆಂದು ವೈಯಕ್ತಿಕವಾಗಿ ಹೇಳಿದ್ದೆ, ಅದು ಪಾರ್ಟಿ ವತಿಯಿಂದ ಹೇಳಿದ್ದಲ್ಲ. ಆದರೂ ಸೋಲಾಗಿದೆ ಎಂದರು.
ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಬೇಕು: ಇದಕ್ಕೂ ಮೊದಲು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ವಕ್ತಾರ ಎಂ.ಬಿ. ಝೀರಲಿ, ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದ ಕೂಡಲೇ ಬೆಳಗಾವಿ ಆರ್ಪಿಡಿ ವೃತ್ತದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಲಾಗಿದೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಘೋಷಣೆ ಕೂಗಿದ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ. ರಾಜ್ಯದ ಅಭಿವೃದ್ಧಿಯ ಸಲುವಾಗಿ ಕೇಂದ್ರ ಸರ್ಕಾರ ಯಾವುದೇ ತಾರತಮ್ಯ ಮಾಡುವುದಿಲ್ಲ. ಚುನಾವಣೆಯಲ್ಲಿ ಸಹಕರಿಸಿದ ಎಲ್ಲ ಬಿಜೆಪಿ ಕಾರ್ಯಕರ್ತರ ಸೇವೆ ಶ್ಲಾಘನೀಯ ಎಂದರು. ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಎಲ್ಲ ನಾಯಕರು ಹೊಣೆ ಹೊತ್ತುಕೊಂಡಿದ್ದಾರೆ. ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಕಾರ್ಯಕರ್ತರು ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡಿದ್ದಾರೆ. ಬಿಜೆಪಿ ನಾಯಕರಿಂದ ಸೋಲು ಕಂಡಿದ್ದಾರೆ ಎನ್ನುವ ಆರೋಪವನ್ನು ಎಂ.ಬಿ. ಝೀರಲಿ ತಳ್ಳಿ ಹಾಕಿದರು.
ಇನ್ನು ಮಾಧ್ಯಮಗೋಷ್ಟಿಯಲ್ಲಿ ಸಂಸದೆ ಮಂಗಳಾ ಅಂಗಡಿ, ಬೆಳಗಾವಿ ನಗರ ಘಟಕದ ಬಿಜೆಪಿ ಅಧ್ಯಕ್ಷ ಅನಿಲ್ ಬೆನಕೆ, ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ:ಇದು ಪ್ರಧಾನಿ ಮೋದಿ ಸೋಲಲ್ಲ, ಕಾಂಗ್ರೆಸ್ ನಾಯಕತ್ವ ದೇಶದಲ್ಲೇ ಸೋತಿದೆ: ಬೊಮ್ಮಾಯಿ