ಚಿಕ್ಕೋಡಿ: ಮಹಾರಾಷ್ಟ್ರದ ವ್ಯಕ್ತಿಯೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಹುಡ್ಕೊ ಕಾಲನಿಯಲ್ಲಿ ನಡೆದಿದೆ.
ಕೊಲ್ಲಾಪು0ರ ಜಿಲ್ಲೆಯ ಕಾಗಲ್ ತಾಲ್ಲೂಕಿನ ಜೈನ್ಯಾಳ ಗ್ರಾಮದ ಯುವರಾಜ ಶ್ರೀಪತಿ ಲೋಹಾರ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಮೃತ ವ್ಯಕ್ತಿಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸೆ.10 ರಂದು ಯುವರಾಜ ನಗರದ ವಿವಿಧೆಡೆ ಸಂಚರಿಸುತ್ತಾ ಇಲ್ಲಿನ ಹುಡ್ಕೊ ಕಾಲೊನಿಯಲ್ಲಿ ಜಾಧವ ಎಂಬುವವರಿಗೆ ಸೇರಿದ ಬಾವಿಯ ಬಳಿ ಬಂದು ಟೀ ಶರ್ಟ್ ತೆಗೆದಿಟ್ಟು ಬಾವಿಯಲ್ಲಿ ಜಿಗಿದಿದ್ದಾನೆ. ಇದನ್ನು ನೋಡಿದ ಕೆಲವರು ಬಹುಶಃ ಈಜಲು ಜಿಗಿದಿರಬಹುದೆಂದು ಭಾವಿಸಿದ್ದಾರೆ. ಆದರೆ ಸಂಜೆಯವರೆಗೂ ಆ ಶರ್ಟ್ ಅಲ್ಲಿಯೇ ಕಾಣಿಸಿಕೊಂಡ ಕಾರಣ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಪರಿಶೀಲನೆ ನಡೆಸಿದಾಗ ಯಾವುದೇ ಸುಳಿವು ಕಂಡುಬರಲಿಲ್ಲ.
ಸೆ.11ರಂದು ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿ ಸಹ ಶೋಧ ನಡೆಸಿದ್ದಾರೆ. ಆದರೆ, ಯಾವುದೇ ಸುಳಿವು ಸಿಗಲಿಲ್ಲ. ಸೆ.12 ವ್ಯಕ್ತಿಯ ಶವ ನೀರಿನಲ್ಲಿ ತೇಲುತ್ತಿರುವುದು ಪತ್ತೆಯಾಗಿದ್ದನ್ನು ಸ್ಥಳೀಯರು ನೋಡಿ ಪೋಲಿಸರಿಗೆ ವಿಷಯ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಪಿ.ಎಸ್.ಐ. ಎ.ಪಿ. ಹೊಸಮನಿ, ಎ.ಎಸ್.ಐ. ಎಸ್.ಎಸ್. ಜಾಧವ ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
ಬಸವೇಶ್ವರ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.