ಚಿಕ್ಕೋಡಿ (ಬೆಳಗಾವಿ): ಚಿಕ್ಕೋಡಿ ಉಪ ವಿಭಾಗದಲ್ಲಿ ಅಕಾಲಿಕ ಮಳೆ ಸುರಿದ ಪರಿಣಾಮ ಕಟಾವಿಗೆ ಬಂದ ಸೋಯಾಬಿನ್ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಬೆಳೆದ ಬೆಳೆ ಇನ್ನೇನು ರಾಶಿ ಮಾಡಬೇಕೆನ್ನುವಷ್ಟರಲ್ಲಿ ಅಕಾಲಿಕ ಮಳೆ ಸುರಿದ ಪರಿಣಾಮ ಜಮೀನಿನಲ್ಲಿ ನೀರು ನಿಂತು ಬೆಳೆಗಳೆಲ್ಲವೂ ಹಾಳಾಗಿದ್ದರಿಂದ ಗಡಿ ಭಾಗದ ರೈತರು ಕಂಗಾಲಾಗಿದ್ದಾರೆ.
ಕೃಷಿ ಇಲಾಖೆ ಕಳಪೆ ಬೀಜಗಳನ್ನು ಬಿತ್ತನೆಗೆ ನೀಡಿದ್ದು, ಬಿತ್ತಿದ ಸೋಯಾಬಿನ್ ಬಿತ್ತನೆ ಬೀಜಗಳು ಸಮರ್ಪಕವಾಗಿ ಮೊಳಕೆ ಬಾರದೆ ನಷ್ಟ ಅನುಭವಿಸಿದ ರೈತರಿಗೆ ಮೂರು ತಿಂಗಳಾದರೂ ಕೃಷಿ ಇಲಾಖೆಯಿಂದ ಪರಿಹಾರ ದೊರೆತಿಲ್ಲ. ಚಿಕ್ಕೋಡಿ ಉಪ ವಿಭಾಗದ ಹುಕ್ಕೇರಿ, ಚಿಕ್ಕೋಡಿ ತಾಲೂಕಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸೋಯಾಬಿನ್ ಬೆಳೆಯಲಾಗುತ್ತದೆ.
ಈ ಬಾರಿ ಕೃಷಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರಿಗೆ ಕಳಪೆ ಸೋಯಾಬಿನ್ ಬೀಜ ವಿತರಣೆ ಮಾಡಿದ್ದರಿಂದ ಬಿತ್ತನೆ ಬೀಜಗಳು ಕಳಪೆಯಾಗಿ ಬಹಳ ನಷ್ಟ ಉಂಟಾಗಿದೆ. ಸರಿಯಾದ ಮೊಳಕೆ ಬಾರದಿದ್ದರಿಂದ, ಕೆಲವು ರೈತರು ಆರ್ಥಿಕ ಸಂಕಷ್ಟದಿಂದಾಗಿ ಬೇರೆ ಬೆಳೆ ಬೆಳೆಯಲು ಆಗಲಿಲ್ಲ. ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತರ ಆಸೆಗೆ ಕಳಪೆ ಬೀಜ ತಣ್ಣೀರೆರಚಿದೆ.
![loss in soyabean agriculture](https://etvbharatimages.akamaized.net/etvbharat/prod-images/kn-ckd-2-soyabina-beleda-raita-kangalu-script-ka10023_14092020114619_1409f_1600064179_46.jpg)
ಈ ಮಧ್ಯೆಯೂ ಕೆಲ ರೈತರು ಸೋಯಾಬಿನ್ ಬೆಳೆ ಬೆಳೆದು ಲಾಭದ ನೀರಿಕ್ಷೆಯಲ್ಲಿದ್ದರು. ಆದರೆ ಈ ಅಕಾಲಿಕ ಮಳೆಯಿಂದ ಜಮೀನುಗಳಿಗೆ ನೀರು ನುಗ್ಗಿದ್ದರ ಪರಿಣಾಮ ಬೆಳೆದ ಬೆಳೆ ಕೈಗೆ ಸಿಗದೆ ಹಾಳಾಗಿದೆ. ಇನ್ನೇನೂ ಕಟಾವು ಮಾಡಬೇಕಾದ ಸೋಯಾಬಿನ್ ಬೆಳೆಯೂ ಕೂಡ ಕಪ್ಪು ಬಣ್ಣಕ್ಕೆ ತುರುಗಿದ್ದು, ಗಡಿಭಾಗದ ರೈತರು ತೀವ್ರ ತೊಂದರೆ ಅನುಭವಿಸಬೇಕಾದ ಪ್ರಸಂಗ ಎದುರಾಗಿದೆ.
ಹುಕ್ಕೇರಿ, ಚಿಕ್ಕೋಡಿ ತಾಲೂಕಿನ ಕೃಷ್ಣಾ, ಹೀರಣ್ಯಕೇಶಿ ನದಿಗಳ ತೀರದಲ್ಲಿ ಇರುವ ಜಮೀನುಗಳ ರೈತರ ಜನೀನುಗಳಲ್ಲಿ ನೀರು ನಿಲ್ಲುತ್ತಿರುವ ಪರಿಣಾಮ ಬೆಳೆದ ಬೆಳೆಗಳೆಲ್ಲವೂ ನೀರಿನಲ್ಲಿಯೇ ಕೊಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನಮಗೆ ಪರಿಹಾರ ರೂಪದಲ್ಲಿ ಹಣ ನೀಡಬೇಡಿ, ನಮ್ಮ ಜಮೀನುಗಳಲ್ಲಿ ಮಳೆಯಿಂದ ನಿಂತ ನೀರುಗಳನ್ನು ಹೊರಗಡೆ ಹಾಕುವ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.