ಬೆಳಗಾವಿ: ಉಪ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಜಿಲ್ಲೆಯಲ್ಲಿ ಗರಿಗೆದರಿವೆ. ಅದರಲ್ಲೂ ಅಥಣಿ ವಿಧಾನಸಭಾ ಕ್ಷೇತ್ರದ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿದೆ.
ಅಥಣಿಯ ಕ್ಷೇತ್ರದ ಪ್ರಭಾವಿ ನಾಯಕ ಲಕ್ಷ್ಮಣ್ ಸವದಿ ಅವರನ್ನು ಮತ್ತೆ ಉಪ ಚುನಾವಣೆಯಲ್ಲಿ ರಾಜಕೀಯವಾಗಿ ಕಟ್ಟಿಹಾಕಲು ಕಾಂಗ್ರೆಸ್ ಮುಖಂಡರು ಭಾರಿ ಕಸರತ್ತು ನಡೆಸುತ್ತಿದ್ದಾರೆ. ಅಥಣಿ ವಿಧಾನಸಭಾ ಕ್ಷೇತ್ರಕ್ಕೆ ಅಕ್ಕಪಕ್ಕದ ಜಿಲ್ಲೆಯ ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಮುಖಂಡರು ಅಖಾಡಕ್ಕಿಳಿದಿದ್ದಾರೆ.
ಮಾಜಿ ಸಚಿವ ಎಂ ಬಿ ಪಾಟೀಲ್ ಹಾಗೂ ಸತೀಶ್ ಜಾರಕಿಹೊಳಿ ಚುನಾವಣ ಅಖಾಡಕ್ಕೆ ಎಂಟ್ರಿ ಆಗಿದ್ದಾರೆ. ಇಂದು ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಕಾಂಗ್ರೆಸ್ ಪಕ್ಷ ಕಾರ್ಯಕರ್ತರ ಸಭೆ ನಡೆಸಲಾಯಿತು. ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವುದರಿಂದ ಯಾರಿಗೆ ಟಿಕೆಟ್ ನೀಡುವುದು ಎಂಬುದರ ಕುರಿತಂತೆ ಚರ್ಚಿಸಲು ಕಾರ್ಯಕರ್ತರ ಸಭೆ ಕರೆದಿದ್ದರು.
ಮೊದಲನೇಯದಾಗಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡುತ್ತಾ ಅಥಣಿ ಮತಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ದಯವಿಟ್ಟು ಕಾರ್ಯಕರ್ತರು ತಮ್ಮ ಅಭಿಪ್ರಾಯವನ್ನು ನೀಡಿ ಎಂದು ಕೇಳಿದರು. ಅಭಿಪ್ರಾಯ ನೀಡಿ ಎಂದು ಕೇಳಿದ ತಕ್ಷಣವೇ ಸಭೆಯಲ್ಲಿ ಗದ್ದಲ ಪ್ರಾರಂಭವಾಗಿ ಕೂಗಾಟ ಚೀರಾಟದೊಂದಿಗೆ ಸತೀಶ್ ಜಾರಕಿಹೊಳಿ ಮಾತನ್ನು ಮೊಟಕುಗೊಳಿಸಿದರು.
ತದನಂತರ ಎಂ ಬಿ ಪಾಟೀಲ್ ಮಾತನಾಡುತ್ತಾ, ಕಾರ್ಯಕರ್ತರಿಗೆ ಕ್ಲಾಸ್ ತೆಗೆದುಕೊಂಡರು. ಚೀರಾಡುವುದು ಶಿಳ್ಳೆ ಹೊಡೆಯುವುದು ನಮ್ಮ ಸಂಸ್ಕೃತಿ ಅಲ್ಲ. ನೀವು ಸೀರಿಯಸ್ ಆಗಿರಲಿಲ್ಲ ಅಂದರೆ ನಾನು ಹೋಗ್ತೀನಿ ಅಂತಾ ಸಭೆಯಲ್ಲಿ ಹೇಳಿದರು. ಎಂ ಬಿ ಪಾಟೀಲ್ ಮಾತನಾಡುತ್ತ ನಮ್ಮಲ್ಲಿ ಸರಿ ಸುಮಾರು ಹತ್ತು ಜನ ಆಕಾಂಕ್ಷಿಗಳ ಪಟ್ಟಿ ಇದೆ. ನಾಳೆಗೆ ಪಕ್ಷದ ವರಿಷ್ಠರ ಜೊತೆ ಮಾತನಾಡಿ ಅಂತಿಮ ಪಟ್ಟಿಯನ್ನು ನಿಮಗೆ ನೀಡುತ್ತೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಹೇಶ್ ಕುಮಟಳ್ಳಿ ನಮಗೆ ದ್ರೋಹ ಬಗೆದು ಬಿಜೆಪಿಯಿಂದ 50 ಕೋಟಿ ರೂ. ಹಣವನ್ನು ಪಡೆದುಕೊಂಡು, ಯಾವುದೇ ನೆರೆ ಸಂತ್ರಸ್ತರಿಗೆ ನೆರವಾಗದೆ ಹೇಡಿತನದಿಂದ ನಮ್ಮನ್ನು ನಂಬಿಸಿ ಮೋಸ ಮಾಡಿದ್ದಾರೆ. ಅವರಿಗೆ ಟಿಕೆಟ್ ನೀಡಿದ್ದು ನಮ್ಮ ತಪ್ಪು. ನಿಮ್ಮಲ್ಲಿ ನಾನು ಕ್ಷಮೆ ಕೇಳುತ್ತೇನೆ ಎಂದು ಕಾರ್ಯಕರ್ತರಲ್ಲಿ ಕ್ಷಮೆ ಕೇಳಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಜತೆಗೆ ಕಾಂಗ್ರೆಸ್ ನಾಯಕರು ಚರ್ಚಿಸಿ ನಾಳೆ ಟಿಕೆಟ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದಾರೆ. ಅಥಣಿ ಮತ್ತು ಕಾಗವಾಡದಲ್ಲಿ ಜಯ ನಮ್ಮದೇ ಆಗಬೇಕೆಂದು ಮಾಜಿ ಗೃಹ ಸಚಿವ ಎಂ.ಬಿ ಪಾಟೀಲ್ ಕಾರ್ಯಕರ್ತರಿಗೆ ಕರೆ ನೀಡಿದರು.