ಬೆಳಗಾವಿ: ಬೆಳಗಾವಿಯಿಂದಲೇ ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಕರೆ ಮಾಡಲಾಗಿದೆ. ಹಿಂಡಲಗಾ ಸೆಂಟ್ರಲ್ ಜೈಲಿನ ಕೈದಿಯೇ ಶನಿವಾರ ಗಡ್ಕರಿ ಮೊಬೈಲ್‌ಗೆ ಫೋನ್ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ. ಈ ವಿಚಾರವನ್ನು ಗಡ್ಕರಿ ಮಹಾರಾಷ್ಟ್ರದ ನಾಗ್ಪುರ ಪೊಲೀಸರ ಗಮನಕ್ಕೆ ತಂದಿದ್ದು, ಆರೋಪಿ ಶೋಧಕ್ಕೆ ನಾಗ್ಪುರ ಪೊಲೀಸರು ಹಿಂಡಲಗಾ ಜೈಲಿಗೆ ಬಂದಿದ್ದಾರೆ.
ನಾಗ್ಪುರ ಪೊಲೀಸರಿಗೆ ಕೊಲ್ಲಾಪುರ, ಸಾಂಗ್ಲಿ ಬೆಳಗಾವಿ ನಗರ ಪೊಲೀಸರು ಸಾಥ್ ನೀಡಿದ್ದಾರೆ. ಶನಿವಾರ ಸಂಜೆಯೂ ಮೂರು ಗಂಟೆಗಳ ಕಾಲ ಜೈಲಿನಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಆರೋಪಿ ಪತ್ತೆಗಾಗಿ ಎರಡನೇ ದಿನವೂ ಶೋಧ ಕಾರ್ಯ ಮುಂದುವರೆದಿದೆ. ಹಿಂಡಲಗಾ ಕಾರಾಗೃಹದಲ್ಲಿ ಆರೋಪಿಗಾಗಿ ಶೋಧಕಾರ್ಯ ನಡೆಯುತ್ತಿದೆ.
ನಿನ್ನೆ ಕೈದಿಯೊಬ್ಬ ಸಚಿವ ನಿತಿನ್ ಗಡ್ಕರಿ ಅವರ ಫೋನ್ ನಂಬರ್‌ಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಹಣ ನೀಡದೇ ಹೋದಲ್ಲಿ ಪ್ರಾಣ ತೆಗೆಯುವ ಬೆದರಿಕೆ ಹಾಕಿದ್ದ. ಈ ಹಿಂದೆ ಉತ್ತರ ವಲಯ ಐಜಿಪಿ ಆಗಿದ್ದ ಅಲೋಕ್ ಕುಮಾರ್ ಅವರಿಗೂ ಕೈದಿಗಳು ಜೀವ ಬೆದರಿಕೆ ಹಾಕಿದ್ದರು. ಹಲವು ಸಲ ಸರ್ಪೈಸ್ ದಾಳಿಯಾದರೂ ಜೈಲಿನಲ್ಲಿ ಮೊಬೈಲ್ ಬಳಕೆ ನಿಲ್ಲುತ್ತಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ಗೃಹ ಸಚಿವ ಆರಗ ಜ್ಞಾನೇಂದ್ರ ಜೈಲಿಗೆ ಭೇಟಿ ನೀಡಿದ್ದರು.
ನಿನ್ನೆ ಬಂದಿತ್ತು ಮೂರು ಬೆದರಿಕೆ ಕರೆಗಳು: ಶನಿವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಕಚೇರಿಗೆ ಮೂರು ಬೆದರಿಕೆ ಕರೆಗಳು ಬಂದಿದ್ದವು. ಕಚೇರಿಯ ಲ್ಯಾಂಡ್ಲೈನ್ ನಂಬರ್‌ಗೆ ಅನಾಮಧೇಯ ವ್ಯಕ್ತಿಗಳು ಕರೆ ಮಾಡಿದ್ದರು. ನಿನ್ನೆ ಬೆಳಗ್ಗೆ 11.25, 11.32 ಮತ್ತು ಮಧ್ಯಾಹ್ನ 12.32ಕ್ಕೆ ಬಿಎಸ್‌ಎನ್‌ಎಲ್‌ನಿಂದ ಮೂರು ಕರೆಗಳು ಬಂದಿವೆ.
ಕರೆಯಲ್ಲಿ ಹಣಕ್ಕೆ ಬೇಡಿಕೆಯಿಟ್ಟಿರುವುದು ಮಾತ್ರವಲ್ಲದೆ ಕೊಲೆ ಬೆದರಿಕೆಯನ್ನೂ ಹಾಕಲಾಗಿತ್ತು. ಕಚೇರಿಯ ಸಿಬ್ಬಂದಿ ಈ ಅನಾಮಧೇಯ ಕರೆಗಳನ್ನು ಸ್ವೀಕರಿಸಿದ್ದರು. ತಕ್ಷಣವೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಕರೆಗಳ ವಿವರಗಳ ದಾಖಲೆಗಳನ್ನು ಕಲೆ ಹಾಕಿದ್ದಾರೆ. ಗಡ್ಕರಿ ಅವರ ಕಚೇರಿಗೆ ಪೊಲೀಸ್ ಭದ್ರತೆಯನ್ನು ನೀಡಿದ್ದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮಕರ ಸಂಕ್ರಾಂತಿ ಪ್ರಯುಕ್ತ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು, ಬೆದರಿಕೆ ಕರೆಗಳ ಬಂದ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ಅವರಿಗೂ, ಕಾರ್ಯಕ್ರಮಗಳ ಸ್ಥಳಗಳಲ್ಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಹಿಂದೆಯೂ ಮಹಾರಾಷ್ಟ್ರದಲ್ಲಿ ಗಣ್ಯ ವ್ಯಕ್ತಿಗಳಿಗೆ ಇಂತಹ ಬೆದರಿಕೆ ಕರೆಗಳು ಬಂದಿರುವುದು ವರದಿಯಾಗಿದೆ. ಹಾಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಮಾಜಿ ಮುಖ್ಯಮಂತ್ರಿ, ಎನ್ಸಿಪಿ ವರಿಷ್ಠ ಶರದ್ ಪವಾರ್, ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಮತ್ತು ಕುಟುಂಬಕ್ಕೂ ಬೆದರಿಕೆ ಕರೆಗಳು ಬಂದಿದ್ದವು.
ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಕಚೇರಿಗೆ ಬಂದವು ಮೂರು ಬೆದರಿಕೆ ಕರೆಗಳು: ಪೊಲೀಸ್ ಭದ್ರತೆ ಹೆಚ್ಚಳ