ಬೆಂಗಳೂರು/ಬೆಳಗಾವಿ: ಆರ್.ಅಶೋಕ್ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ 50 ಸೀಟು ಗೆಲ್ಲಿಸಿಕೊಂಡು ಬರಲಿ. ಆಮೇಲೆ ಅವರಿಗೆ ಮೀಸಲಾತಿ ಕೊಡೋಣ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲೆಸೆದರು.
ಬೆಳಗಾವಿ ಸುವರ್ಣಸೌಧದಲ್ಲಿ ಮಾತನಾಡಿ ಧಮ್ಕಿ ಹಾಕಿ ಮೀಸಲಾತಿ ಪಡೆಯುತ್ತಿದ್ದಾರೆ ಎಂಬ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ನಾವು ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತರು ಬಿಜೆಪಿಗೆ ಐವತ್ತು ಸ್ಥಾನ ಕೊಡುತ್ತಿದ್ದೇವೆ. ದೇವೇಗೌಡರ ಥರ ಅಶೋಕ್ ಸೀಟು ಗೆಲ್ಲಿಸಿಕೊಂಡು ಬರಲಿ. ನಾವು ಯಾರಿಗೂ ಚಾಲೆಂಜ್ ಮಾಡುವುದಿಲ್ಲ. ಧಮ್ಕಿ ಎಂದಿರುವುದಕ್ಕೆ ಉತ್ತರ ಕೊಡುತ್ತಿದ್ದೇನೆ ಎಂದು ತಿರುಗೇಟು ನೀಡಿದರು.
ಪಂಚಮಸಾಲಿಗೆ 2ಎ ಅಥವಾ 2 ಬಿ ಯಿಂದ ಝೆಡ್ ಯಾವುದಾದರೂ ಮೀಸಲಾತಿ ಕೊಡಿ. ಆದರೆ 2ಎ ಗೆ ಇರುವ ಸೌಲಭ್ಯ ಇರಬೇಕು. ಬಡವರಿಗಾಗಿ ಮಾತ್ರ ನಾವು ಮೀಸಲಾತಿ ಕೇಳುತ್ತಿದ್ದೇವೆ. ನನ್ನ ಹಾಗೆ ಶಾಸಕ ಆದವರಿಗೆ, ಡಿಸಿ ಆದವರಿಗೆ ಶ್ರೀಮಂತರಿಗೆ ಈ ಮೀಸಲಾತಿ ಬೇಡ. ಈ ಕಂಡಿಷನ್ ಹಾಕಿಯೇ ಮೀಸಲಾತಿ ನೀಡಿ. ನಾವು ರಾಜಕೀಯಕ್ಕಾಗಿ ಕೇಳುತ್ತಿಲ್ಲ. ನನಗೆ ಅದರ ಅಗತ್ಯವಿಲ್ಲ. ನಾನು ಹೇಗಾದರೂ ಗೆಲ್ಲುತ್ತೇನೆ ಎಂದು ಹೇಳಿದರು.
ನಾವು ನಮ್ಮ ಸಮುದಾಯದ ನ್ಯಾಯಯುತ ಬೇಡಿಕೆ ಕೇಳುತ್ತಿದ್ದೇವೆ. ಸಿಎಂ ಬೊಮ್ಮಾಯಿ ಅವರು ಡಿ.29 ರಂದು ಮೀಸಲಾತಿ ಘೋಷಣೆ ಮಾಡುತ್ತೇವೆ ಎಂದಿದ್ದಾರೆ. ಅಂದು ಯಾವುದೇ ಸಮುದಾಯಕ್ಕೆ ಅಸಮಾಧಾನ ಆಗದ ರೀತಿಯಲ್ಲಿ ಮೀಸಲಾತಿಯನ್ನು ವಿಂಗಡನೆ ಮಾಡಿ, ಸಾಮಾಜಿಕ ನ್ಯಾಯ ಒದಗಿಸುವ ಭರವಸೆ ಇದೆ. ಮೀಸಲಾತಿ ಸಿಗದೇ ಇದ್ದರೆ ಮಾಡು ಇಲ್ಲವೇ ಮಡಿ ಎಂದರು.
ಇದನ್ನೂ ಓದಿ: ನಾಳೆ ಪಂಚಮಸಾಲಿ ಮೀಸಲಾತಿ ಬಗ್ಗೆ ಸಿಎಂ ಐತಿಹಾಸಿಕ ಘೋಷಣೆ: ಯತ್ನಾಳ್