ಬೆಳಗಾವಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೇವಲ ಕನಸಷ್ಟೇ. ಅದು ಕನಸಾಗಿಯೇ ಉಳಿಯಲಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
ನಾಯಕತ್ವ ಬದಲಾವಣೆ ಬಗ್ಗೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ವೇಳೆ ಮಾಹಿತಿ ನೀಡಿದ ಅರುಣ್ ಸಿಂಗ್, ನಾಯಕತ್ವ ಬದಲಾವಣೆ ಆಗಲ್ಲ. ನಾಯಕತ್ವ ಬದಲಾವಣೆ ಕೇವಲ ಕನಸಾಗಿಯೇ ಉಳಿಯಲಿದೆ. ನಮ್ಮದು ಶಿಸ್ತಿನ ಪಕ್ಷ. ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ತೆಗೆದುಕೊಳ್ಳುವ ಮನಸು ನನಗಿಲ್ಲ. ಆ ವ್ಯಕ್ತಿಯ ಬಗ್ಗೆ ಮಾತನಾಡಿದ್ರೆ ಆತನ ಪ್ರಸಿದ್ಧಿ ಹೆಚ್ಚಾಗುತ್ತೆ. ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಪ್ರಶ್ನೆ ಕೇಳಬೇಡಿ. ಅವರ ಬಗ್ಗೆ ಮಾತನಾಡಿದರೆ ಅವರ ಹೆಸರು ಪ್ರಸಿದ್ಧಿ ಆಗುತ್ತೆ.
ಮಾಧ್ಯಮಗಳಿಗೆ ಯತ್ನಾಳ್ ಮೇಲೆ ನಂಬಿಕೆ ಇರಬಹುದು. ಬಿಜೆಪಿಗೆ ಅವರ ಮೇಲೆ ಝೀರೋ ಝೀರೋ ಒನ್ ಪರ್ಸೆಂಟ್ ನಂಬಿಕೆಯೂ ಇಲ್ಲ. ಯತ್ನಾಳ್‌ಗೆ ನೋಟಿಸ್ ನೀಡಲಾಗಿದೆ. ಯತ್ನಾಳ್ ಪಕ್ಷದಿಂದ ಹೊರಹಾಕುವಂತ ವ್ಯಕ್ತಿಯೇ ಇದ್ದಾರೆ. ಯತ್ನಾಳ್ ಬಗ್ಗೆ ಮಾತನಾಡಿ ಪ್ರಸಿದ್ಧಿ ಮಾಡಲು ಇಷ್ಟಪಡಲ್ಲ. ನಮ್ಮ ಮನಸ್ಸಿನಲ್ಲಿರುವ ಸ್ಟ್ರ್ಯಾಟಜಿ ಮಾಧ್ಯಮಗಳ ಮುಂದೆ ಬಹಿರಂಗ ಪಡಿಸಲ್ಲ. ಇದರ ಹಿಂದೆಯೂ ಕೆಲವು ಕಾರಣಗಳು ಇರಬಹುದು. ಈಗ ಅವರನ್ನು ಹೊರಹಾಕಿದ್ರೆ ಸ್ವತಂತ್ರರಾಗುತ್ತಾರೆ. ಈ ಕಾರಣಕ್ಕೆ ಅವರ ಹೆಸರನ್ನು, ಅವರ ಹೇಳಿಕೆಯನ್ನು ನಾನು ಪ್ರಸ್ತಾಪಿಸುವುದಿಲ್ಲ. ಅವರ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ನಮ್ಮಲ್ಲಿ ಶಿಸ್ತು ಸಮಿತಿ ಇದೆ. ಅವರು ಎಲ್ಲವನ್ನೂ ಗಮನಿಸುತ್ತಾರೆ. ನಾನೇನು ಶಿಸ್ತು ಸಮಿತಿಯಲ್ಲಿಲ್ಲ. ಆದರೆ, ಶಿಸ್ತು ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದರು.