ಬೆಂಗಳೂರು/ಬೆಳಗಾವಿ: ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಮಧ್ಯಂತರ ವರದಿ ಸಲ್ಲಿಸಿದ್ದು, ವರದಿ ಬಗ್ಗೆ ಕಾನೂನು ಸಚಿವರ ಜತೆ ಚರ್ಚಿಸಿ ಮೀಸಲಾತಿ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಇವತ್ತು ಬೆಳಗ್ಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಜಯಪ್ರಕಾಶ್ ಹೆಗ್ಡೆ ಭೇಟಿ ಮಾಡಿ ಮಧ್ಯಂತರ ವರದಿ ಕೊಟ್ಟಿದ್ದಾರೆ. ಅದರ ಬಗ್ಗೆ ಮುಂದೇನು ಕ್ರಮ ತಗೆದುಕೊಳ್ಳಬೇಕು ಎಂದು ಕಾನೂನು ಸಚಿವರ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಆದಷ್ಟು ಬೇಗ ಕಾನೂನಾತ್ಮಕವಾಗಿ ಚರ್ಚಿಸಿ, ಎಲ್ಲ ಸಮುದಾಯದ ನಾಯಕರ ವಿಶ್ವಾಸದೊಂದಿಗೆ ಸೂಕ್ತ ನಿರ್ಧಾರ ಮಾಡುತ್ತೇವೆ ಎಂದು ಸದನಕ್ಕೆ ತಿಳಿಸಿದರು.
ಕಾನೂನಾತ್ಮಕವಾಗಿ ಚರ್ಚಿಸಿ ತೀರ್ಮಾನ: ಸಾಮಾನ್ಯವಾಗಿ ವರದಿ ಬಂದ ಸಂದರ್ಭದಲ್ಲಿ ಸರ್ಕಾರ ಒಪ್ಪದೇ ಅದರ ವಿವರ ಯಾವತ್ತೂ ಬಹಿರಂಗ ಪಡಿಸಿಲ್ಲ. ನಾಗಮೋಹನ್ ದಾಸ್ ವರದಿ ಬಂದು ಒಂದು ವರ್ಷ ಆದ ಮೇಲೆ ಅದನ್ನು ಒಪ್ಪಿ ವಿವರ ಕೊಟ್ಟಿದ್ದೆವು.
ಸದಾಶಿವ ಆಯೋಗ ವರದಿ ಬಂದು ಹತ್ತು ವರ್ಷ ಆದರೂ ಸರ್ಕಾರ ಅದನ್ನು ಒಪ್ಪದ ಕಾರಣ ವಿವರ ಕೊಟ್ಟಿಲ್ಲ. ಅದೇ ರೀತಿ ಕಾಂತರಾಜು ವರದಿ ಬಂದರೂ ಆಯೋಗದಲ್ಲಿ ಇದೆ. ಆದರೆ, ಈ ವರದಿ ಬಗ್ಗೆ ಕಾನೂನಾತ್ಮಕ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ. ಎಲ್ಲ ಪಕ್ಷದ ನಾಯಕರ ವಿಶ್ವಾಸದೊಂದಿಗೆ ಮುಂದುವರಿಯುತ್ತೇವೆ ಎಂದು ಮಾಹಿತಿ ನೀಡಿದರು.
ಅವಧಿಗೆ ಮುನ್ನ ಚುನಾವಣೆ ಇಲ್ಲ: ಅವಧಿ ಮುಂಚೆ ಚುನಾವಣೆ ಮಾಡುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು. ಅವಧಿ ಮುನ್ನ ಚುನಾವಣೆಯ ಬಗ್ಗೆ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ದೆಹಲಿ ನಾಯಕರು ಸಿಎಂ ಜತೆಗೆ ಮಾತನಾಡಿದ್ದಾರೆ ಎಂಬುದು ಸತ್ಯವಲ್ಲ. ದೆಹಲಿ ನಾಯಕರು ನನ್ನ ಜತೆ ಮಾತನಾಡಿಲ್ಲ. ಅವಧಿ ಮುಂಚೆ ಚುನಾವಣೆ ಮಾಡುವ ಯಾವುದೇ ಪ್ರಸ್ತಾಪ ಇಲ್ಲ ಎಂದು ತಿಳಿಸಿದರು.
ಸಂಪುಟ ವಿಸ್ತರಣೆ ಖಚಿತ: ಕೆ.ಎಸ್. ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಭೇಟಿ ಸಂಬಂಧ ಪ್ರತಿಕ್ರಿಯಿಸಿದ ಅವರು, ನನ್ನ ದೆಹಲಿ ಭೇಟಿಯ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಏನು ಮಾತುಕತೆ ನಡೆದಿದೆ. ಅದರ ವಿವರ ನೀಡಿದ್ದೇನೆ. ಮತ್ತೊಂದು ಬಾರಿ ದೆಹಲಿಗೆ ಭೇಟಿ ನೀಡಲಿದ್ದೇನೆ. ಸಂಪುಟದ ವಿಸ್ತರಣೆಯ ಅಗತ್ಯತೆ ಬಗ್ಗೆ ಮನವರಿಕೆ ಮಾಡಿದ್ದೇನೆ.
ಈ ಬಾರಿ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಸೂಚನೆ ನೀಡುತ್ತೆ ಎಂಬ ವಿಶ್ವಾಸ ಇದೆ. ಈಶ್ವರಪ್ಪ ಹಾಗೂ ರಮೇಶ್ ಅಸೆಂಬ್ಲಿಗೆ ಬರ್ತಾರೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.
ಅಷ್ಟು ಶಕ್ತಿ ಇದ್ದರೆ ಸುಪ್ರೀಂದಲ್ಲಿ ಹೋರಾಡಲಿ: ಮಹಾರಾಷ್ಟ್ರ ನಾಯಕರ ಉದ್ಧಟತನದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ತರಹದ ಉದ್ಧಟತನ ಹೇಳಿಕೆ ಕೊಡುವುದರಿಂದ ಯಾವುದೇ ಪ್ರಯೋಜನ ಆಗಲ್ಲ. ಅವರ ರಾಜಕೀಯ ಉದ್ದೇಶಕ್ಕಾಗಿ ಆ ತರಹ ಮಾತನಾಡಿದ್ದಾರೆ.
ಅವರು ಹೇಳಿರುವ ಯಾವುದು ಕೂಡ ಕಾರ್ಯಗತ ಮಾಡೋಕೆ ಸಾಧ್ಯವೇ ಇಲ್ಲ. ಒಂದು ರಾಜ್ಯ ಇನ್ನೊಂದು ರಾಜ್ಯಗಳ ಸಂಬಂಧ ಇದ್ದೇ ಇರುತ್ತದೆ. ಈಗಾಗಲೇ ಗಡಿ ವಿವಾದ ಸುಪ್ರೀಂಕೋರ್ಟ್ ನಲ್ಲಿದೆ .ಅವರಿಗೆ ಅಷ್ಟು ಶಕ್ತಿ ಇದ್ರೆ ಅಲ್ಲಿ ಹೋರಾಟ ಮಾಡಲಿ ಎಂದು ಸವಾಲು ಹಾಕಿದರು.
ಕನ್ನಡಿಗರು ಭಾರತೀಯ ಸೈನಿಕರಿದ್ದಂತೆ: ನಮ್ಮ ವಾದವನ್ನು ಸುಪ್ರೀಂಕೋರ್ಟ್ ದಲ್ಲಿ ಗಟ್ಟಿಯಾಗಿ ಮಂಡಿಸುತ್ತೇವೆ ಎಂದ ಅವರು, ಸಂಜಯ್ ರಾವತ್ ಏನು..? ಯಾವಾಗಲೂ ಅವರು ಪ್ರಚೋದನೆ ಹೇಳಿಕೆ ಕೊಡ್ತಾರೆ ಅಷ್ಟೇ. ಅವರು ಚೈನಾ ತರಹ ಬಂದರೆ, ಭಾರತದ ಸೇನೆ ತರಹ ನಮ್ಮ ಕನ್ನಡಿಗರು ಅದನ್ನು ಹಿಮ್ಮೆಟ್ಟಿಸುತ್ತಾರೆ ಎಂದು ತಿರುಗೇಟು ನೀಡಿದರು.
ಇದನ್ನೂಓದಿ:ಪಂಚಮಸಾಲಿ ಮೀಸಲಾತಿ ಇಂದೇ ಘೋಷಿಸಿ.. ಇಲ್ಲವಾದರೆ ನೀವೇ ಬಿಜೆಪಿ ಕೊನೆ ಸಿಎಂ: ಶಾಸಕ ಯತ್ನಾಳ್