ಬೆಳಗಾವಿ: ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಹಲವಾರು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಆದರೆ, ಇವುಗಳನ್ನೆಲ್ಲ ಸಹಿಸದೆ ಸ್ವಯಂಘೋಷಿತ ಶಾಸಕರು ಹಾಗೂ ಗೋಕಾಕ್ ಶಾಸಕ ನಮ್ಮ ಕ್ಷೇತ್ರಕ್ಕೆ ಬಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಪ್ರಜಾದ್ವನಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಕಳೆದ 24 ವರ್ಷದಿಂದ ಶಾಸಕರಾಗಿ 16 ವರ್ಷದಿಂದ ಅವರದೇ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ನಮ್ಮ ಬಗ್ಗೆ ಮಾತನಾಡುತ್ತಾರೆ. ನಾನು ಕೇವಲ 4 ವರ್ಷ ಶಾಸಕಿಯಾಗಿ ನನ್ನ ಶಕ್ತಿ ಮೀರಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಆದರೆ ನನ್ನ ಬಗ್ಗೆ ಮಾತನಾಡುತ್ತಾರೆ ಎಂದರು.
ಗೋಕಾಕ್ನಲ್ಲಿ ರಿಪಬ್ಲಿಕ್ ಕ್ಷೇತ್ರವಾಗಿದೆ. ಅಲ್ಲಿ ಪೊಲೀಸ್ ಸ್ಟೇಷನ್, ತಹಶೀಲ್ದಾರ್ ಕಚೇರಿ, ಸಬ್ ರಿಜಿಸ್ಟರ್ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ತಮ್ಮನ್ನು ತಾವು ಮಾರಿಕೊಂಡು ಇನ್ನೊಬ್ಬರ ಬಗ್ಗೆ ಮಾತನಾಡುತ್ತಾರೆ ಎಂದು ನೇರವಾಗಿ ಹೆಸರು ಹೇಳದೇ ರಮೇಶ್ ಜಾರಕಿಹೊಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನೀವು ಮೊದಲು ಕಬ್ಬಿನ ಬಿಲ್ಲನ್ನು ಕೊಟ್ಟು ನನ್ನ ಕ್ಷೇತ್ರದ ಬಗ್ಗೆ ಮಾತನಾಡಿ, ನಂದಿಹಳ್ಳಿ ಗ್ರಾಮದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಮ್ಮ ಹೆಸರನ್ನೇ ಬರೆದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಡಿಗೇರಿ, ಮುತ್ನಾಳ ಗ್ರಾಮದ ಹಲವು ರೈತರ ಕಬ್ಬಿನ ಬಿಲ್ ಬಾಕಿ ಉಳಿದಿದೆ. ನನ್ನ ಕ್ಷೇತ್ರದ ರೈತರ ಕಬ್ಬಿನ ಬಾಕಿ ಹಣವನ್ನು ನೀಡಿ ನನ್ನ ಕ್ಷೇತ್ರಕ್ಕೆ ಕಾಲಿಡಿ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಮೇಶ್ ಜಾರಕಿಹೊಳಿ ಆಪ್ತ ನಾಗೇಶ್ ವಿರುದ್ಧ ಹೊಸ ಬಾಂಬ್: ನಾವು ಇಂದಿರಾ ಗಾಂಧಿ ವಂಶದವರು, ಬಡವರ ಪರವಾಗಿದ್ದೇವೆ. ನಿಮ್ಮಂತ ಶ್ರೀಮಂತರು ಅಲ್ಲ ಎಂದು ಹೆಸರು ಹೇಳದೆ ರಮೇಶ್ ಜಾರಕಿಹೊಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ವಯಂಘೋಷಿತ ಶಾಸಕ ನಾಗೇಶ್ ಮನ್ನಳಕ್ಕೋರ ಕಳೆದ 2018 ರ ಚುನಾವಣೆ ಸಂದರ್ಭದಲ್ಲಿ ಅವರು ನನ್ನ ಬಳಿ ವ್ಯವಹಾರಕ್ಕೆ ಬಂದಿದ್ದರು. ನಾನು ಕಾಂಗ್ರೆಸ್ ಪಕ್ಷಕ್ಕೆ ಬರುತ್ತೇನೆ. 40 ಲಕ್ಷ ರೂಪಾಯಿ ಕೊಡಿ ಎಂದು ಡೀಲ್ಗೆ ಬಂದಿದ್ದರು. ಆದರೆ, ಇವತ್ತು ಚುನಾವಣೆ ನಿಲ್ಲುವುದಕ್ಕೆ ತಿರುಗುತ್ತಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ರಮೇಶ್ ಜಾರಕಿಹೊಳಿ ಆಪ್ತ ನಾಗೇಶ್ ವಿರುದ್ಧ ಹೊಸ ಬಾಂಬ್ ಹಾಕಿದ್ರು.
ರಮೇಶ್ ಜಾರಕಿಹೊಳಿ ಬೆನ್ನು ಹತ್ತಿದವರು ಮನೆ ಸೇರಿದ್ದಾರೆ. ವೀರ್ ಕುಮಾರ್, ವಿವೇಕ್ ರಾವ್ ಪಾಟೀಲ್, ಘಾಟಗೆ, ಮಹಾಂತೇಶ ಕವಟಗಿಮಠ ಮನೆ ಸೇರಿದ್ದಾರೆ. ಸತೀಶ್ ಜಾರಕಿಹೊಳಿ ಅವರು ನನಗೆ ಹೇಳುತ್ತಾ ಇದ್ದರು. ಎಚ್ಚರದಿಂದ ಇರು ಅಂತ. ನನ್ನ ಅದೃಷ್ಟ ಚೆನ್ನಾಗಿತ್ತು. ನಾನು ಉಳಿದೆ ಎಂದು ಹೇಳಿದರು. ನನ್ನ ಅನುದಾನದ ನಿರ್ಮಾಣದಲ್ಲಿ ರಾಜಹಂಸಗಡ ಶಿವಾಜಿ ಮಹಾರಾಜರ ಪುತ್ಥಳಿ ಉದ್ಘಾಟನೆ ಮಾಡುವುದಕ್ಕೆ ನಿಮಗೆ ನಾಚಿಕೆ ಆಗಲ್ವ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಮಾಜಿ ಶಾಸಕ ಸಂಜಯ ಪಾಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಸರ್ಕಾರದಿಂದ 7ನೇ ವೇತನ ಆಯೋಗ ಶಿಫಾರಸು ಜಾರಿಯಾಗದಿದ್ದರೆ, ನಾವು ಮಾಡುತ್ತೇವೆ: ಸಿದ್ದರಾಮಯ್ಯ