ಬೆಳಗಾವಿ: ಕಾರ್ಯಕಾರಿಣಿ ಸಭೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಮೊದಲ ಆದ್ಯತೆ ನೀಡಲಾಗಿದೆ. ರಾಜ್ಯದಲ್ಲಿ ಅತೀ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಆಯ್ಕೆ ಮಾಡುವ ಕಾರ್ಯತಂತ್ರ ರೂಪಿಸಲಾಗುವುದು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ನಗರದಲ್ಲಿ ಸುದ್ದಿಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಿದ್ದಾರೆ. ರಾಜ್ಯದ ಕೋರ್ ಕಮಿಟಿ ಸಭೆಯಲ್ಲಿ ಅನೇಕ ವಿಚಾರಗಳನ್ನು ಚರ್ಚಿಸಲಾಗಿದೆ. ಇಂದಿನ ಸಭೆಯಲ್ಲಿ ಮುಂದಿನ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳ ಜೊತೆಗೆ ಲೋಕಸಭೆ ಉಪ ಚುನಾವಣೆ ಕುರಿತಂತೆ ಸಂಕ್ಷಿಪ್ತ ಚರ್ಚೆ ಆಗುತ್ತದೆ. ಆ ಪೈಕಿ ಗ್ರಾಮ ಪಂಚಾಯತ್ ಚುನಾವಣೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಈವರೆಗೆ ಕಾರ್ಯಕರ್ತರು ನಾಯಕರಿಗಾಗಿ ದುಡಿಯುತ್ತಿದ್ದರು. ಆದರೀಗ ಪಕ್ಷದ ಆಲೋಚನೆಯಂತೆ ಕಾರ್ಯಕರ್ತರಿಗಾಗಿ ನಾಯಕರು ಈ ಚುನಾವಣೆಯಲ್ಲಿ ದುಡಿಯಬೇಕು. ನಾಯಕರು ಕಾರ್ಯಕರ್ತರಾಗಿ ಕೆಲಸ ಮಾಡಬೇಕು ಎಂಬ ಸದ್ದುದೇಶ ಇಟ್ಟುಕೊಳ್ಳಲಾಗಿದೆ ಎಂದರು.
ಓದಿ: ಬೆಳಗಾವಿಯಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ.. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಹಿನ್ನೆಲೆ ಪೊಲೀಸ್ ಬಂದೋಬಸ್ತ್
ಈ ನಿಟ್ಟಿನಲ್ಲಿ ಮೊದಲ ಆದ್ಯತೆಯಾಗಿ 5,808 ಗ್ರಾಮ ಪಂಚಾಯತ್ಗಳಲ್ಲಿ ಶೇ. 80ರಷ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಕಾರ್ಯಕರ್ತರೇ ಆಯ್ಕೆ ಆಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ಅನುದಾನವನ್ನು ನಿಜವಾದ ಫಲಾನುಭವಿಗಳಿಗೆ ಮುಟ್ಟಿಸುವ ಪ್ರಾಮಾಣಿಕ ಕಾರ್ಯಕರ್ತರನ್ನು ಆಯ್ಕೆ ಮಾಡುವ ಗುರಿ ಹೊಂದಲಾಗಿದೆ ಎಂದು ಸವದಿ ತಿಳಿಸಿದರು.