ಬೈಲಹೊಂಗಲ (ಬೆಳಗಾವಿ): ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಮೂರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಪಟ್ಟಣದ ವಿವೇಕಾನಂದ ನಗರದ ನಿವಾಸಿ ಆನಂದ ಬಡಿಗೇರ (35) ಕೊಲೆಯಾದ ವ್ಯಕ್ತಿ. ಚೆನ್ನಮ್ಮ ಸರ್ಕಲ್ ನಿವಾಸಿಗಳಾದ ಮಂಜುನಾಥ ಬಡೇನ್ನವರ, ವಿವೇಕ ಬೀಡಿಕಿ ಮತ್ತು ವಿರೇಶ ಜೋತಿ ಬಂಧಿತ ಆರೋಪಿಗಳು.
ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ಮೃತರ ತಾಯಿ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ತನಿಖೆ ಕೈಗೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಮರನಾಥ ರೆಡ್ಡಿ, ಎಎಸ್ಪಿ ಪ್ರದೀಪ ಗುಂಟೆ ಅವರ ಮಾರ್ಗದರ್ಶನದಲ್ಲಿ ಸಿಪಿಐ ಯು.ಹೆಚ್.ಸಾತೇನಹಳ್ಳಿ, ಪಿಎಸ್ಐ ಈರಪ್ಪ ರಿತ್ತಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.
ಬೈಲಹೊಂಗಲದಿಂದ ಬೆಳಗಾವಿಗೆ ಹೋಗುವ ರಸ್ತೆಯಲ್ಲಿ ಆರೋಪಿಗಳಿರುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಬಲೆ ಹಾಕಿದ್ದಾರೆ.