ಬೆಳಗಾವಿ: ಕೆಲಸಕ್ಕೆ ಬಂದ್ರೂ ಮೇಲಧಿಕಾರಿಗಳು ಕೆಲಸ ನೀಡುತ್ತಿಲ್ಲ ಎಂದು ಆರೋಪಿಸಿ ನಗರದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಬೆಳಗಾವಿ 3ನೇ ಘಟಕದ ಆವರಣದಲ್ಲಿ ಕೆಎಸ್ಆರ್ಟಿಸಿ ಸಿಬ್ಬಂದಿ ಪ್ರತಿಭಟನೆ ನಡೆಸಿದರು.
ಮೇ 31ರವರೆಗೆ ಲಾಕ್ಡೌನ್ ಅವಧಿಯಲ್ಲಿ ಬೇರೆ ಜಿಲ್ಲೆಗಳಲ್ಲಿರುವ ಸಿಬ್ಬಂದಿ ಕರ್ತವ್ಯಕ್ಕೆ ಮರಳಲು ಸಾಧ್ಯವಾಗಿರಲಿಲ್ಲ. ಇದರಿಂದ ಕೆಲ ಸಿಬ್ಬಂದಿಗೆ ಕರ್ತವ್ಯಕ್ಕೆ ಅವಕಾಶ ನೀಡಿ ಇನ್ನುಳಿದ ಸಿಬ್ಬಂದಿಗೆ ರಜೆ ನೀಡಲಾಗಿತ್ತು. ಆದ್ರೆ, 5.0 ಲಾಕ್ಡೌನ್ ಸಡಿಲಿಕೆಯಿಂದ ಕರ್ತವ್ಯಕ್ಕೆ ಮರಳಿದ ಸಿಬ್ಬಂದಿಗೆ ಡಿಪೋ ಮ್ಯಾನೇಜರ್ ಕೆಲಸ ನೀಡುತ್ತಿಲ್ಲ ಎಂದು ಸಿಬ್ಬಂದಿ ಆರೋಪಿಸುತ್ತಿದ್ದಾರೆ.
ಇನ್ನು ಕರ್ತವ್ಯಕ್ಕೆ ಮರಳುವಂತೆ ಮೇ 19ಕ್ಕೆ ಸರ್ಕಾರ ಸಾರಿಗೆ ಇಲಾಖೆಗೆ ಸೂತ್ತೋಲೆ ಹೊರಡಿಸಿತ್ತು. ಆದ್ರೆ, 19 ರಂದು ಕರ್ತವ್ಯಕ್ಕೆ ಮರಳದಿರುವ ಸಿಬ್ಬಂದಿಗೆ ಡಿಪೋ ಮ್ಯಾನೇಜರ್ ಉದ್ದೇಶಪೂರ್ವಕವಾಗಿಯೇ ಮೇ 19ರಿಂದ ಇಲ್ಲಿಯವರೆಗೆ ಗೈರು ಹಾಜರಿ ಹಾಕಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಕೊರೊನಾ ವೈರಸ್ ಹಿನ್ನೆಲೆ ದೂರದ ಜಿಲ್ಲೆಗಳು ಹಾಗೂ ತಾಲೂಕಿನಿಂದ ಬರಲು ಸಾಧ್ಯವಾಗಿರಲಿಲ್ಲ. ಆದರೆ ಲಾಕ್ಡೌನ್ ಸಡಿಲಿಕೆ ಮಾಡಿದ್ದರಿಂದ ಎಲ್ಲ ಸಿಬ್ಬಂದಿ ಕೆಲಸಕ್ಕೆ ಬಂದಿದ್ದೆವೆ. ಆದ್ರೆ, ಮೇಲಧಿಕಾರಿಗಳು ಮಾತ್ರ ನಾವು ಬರದೇ ಇರುವ ಕುಂಟು ನೆಪ ಇಟ್ಟುಕೊಂಡು ನಮಗೆ ಕೆಲಸ ನೀಡುತ್ತಿಲ್ಲ. ಕೆಲಸ ಬೇಕಾದರೆ ಜಿಲ್ಲಾಧಿಕಾರಿಗಳ ಅನುಮತಿ ತೆಗೆದುಕೊಂಡು ಬಂದರೆ ಮಾತ್ರ ಕೆಲಸ ನೀಡುವುದಾಗಿ ಡಿಪೋ ಮ್ಯಾನೇಜರ್ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಾರಿಗೆ ಸಿಬ್ಬಂದಿ ತಮ್ಮ ಅಳಲು ತೋಡಗಿಕೊಂಡಿದ್ದಾರೆ.