ಬೆಳಗಾವಿ: ಎಂದೆಂದೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ನಮ್ಮ ನಾಯಕ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಿನ್ನೆ ನಡೆದ ಬಿಜೆಪಿ ನಾಯಕರ ಸಭೆಯಲ್ಲಿ ಸಿಎಂ ಮತ್ತು ತಮ್ಮ ಮಧ್ಯೆ ಒಮ್ಮತ ಮೂಡಲಿಲ್ಲವಲ್ಲ ಎಂಬ ಪ್ರಶ್ನೆಗೆ ಬೆಳಗಾವಿಯಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಅವರು, ನೀವೇನು ಸಭೆಯೊಳಗೆ ಬಂದು ನೋಡಿದ್ದೀರಾ? ಮಾಧ್ಯಮಗಳಿಗೆ ಸ್ವಾತಂತ್ರ್ಯ ಇದೆ. ಅದನ್ನು ಕಸಿಯುವ ಕೆಲಸಕ್ಕೆ ನಾನು ಮುಂದಾಗಲ್ಲ. ನಿನ್ನೆ ಬಿಜೆಪಿ ನಾಯಕರು ಸಭೆ ನಡೆಸಿದ್ದು ನಿಜ. ಆದರೆ, ಸಭೆಯ ಬಗ್ಗೆ ತಪ್ಪಾಗಿ ಸುದ್ದಿಗಳು ಪ್ರಕಟವಾಗಿವೆ. ಬಿ.ಎಸ್. ಯಡಿಯೂರಪ್ಪ ಅವರೇ ಎಂದೆಂದೂ ನಮ್ಮ ನಾಯಕ. ಎಲ್ಲರೂ ಒಟ್ಟಾಗಿ ಸಭೆ ಮಾಡುವ ಸ್ವಾತಂತ್ರ್ಯವನ್ನು ಪಕ್ಷ ನಮಗೆ ಕಲ್ಪಿಸಿದೆ. ಈ ಅವಕಾಶ ಕಾಂಗ್ರೆಸ್-ಜೆಡಿಎಸ್ನಲ್ಲಿ ಇದೆಯಾ? ಬಿಜೆಪಿ ವಿರುದ್ಧ ಆರೋಪ ಮಾಡದಿದ್ರೆ ಕೈ-ದಳದ ನಾಯಕರಿಗೆ ತಿಂದಿದ್ದು ಕರಗಲ್ಲ. ಹೀಗಾಗಿ ಏನೇನೋ ಆರೋಪ ಮಾಡ್ತಿದ್ದಾರೆ, ಅವರಿಗೆ ತಿಂದಿದ್ದಾದರೂ ಕರಗಲಿ ಬಿಡಿ ಎಂದು ವ್ಯಂಗ್ಯವಾಡಿದರು.
ಗ್ರಾಮ ಪಂಚಾಯಿತಿ ಚುನಾವಣೆ ಬಳಸಿ ತಳಮಟ್ಟದಲ್ಲಿ ಬಿಜೆಪಿ ಸಂಘಟಿಸುವ ಅವಶ್ಯಕತೆ ನಮಗಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರವೂ ಅಸ್ತಿತ್ವದಲ್ಲಿದೆ, 25 ಸಂಸದರು ಆಯ್ಕೆ ಆಗಿದ್ದಾರೆ. ತಳಮಟ್ಟದಲ್ಲಿ ಬಿಜೆಪಿ ಗಟ್ಟಿ ಇದೆ. ರಾಜ್ಯದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಈ ಕಾರಣಕ್ಕೆ ಗ್ರಾ.ಪಂ ಚುನಾವಣೆ ಮುಂದೂಡುವಂತೆ ಸರ್ಕಾರ ಚುನಾವಣೆ ಆಯೋಗಕ್ಕೆ ಪತ್ರ ಬರೆದಿದೆ.
ಈ ಸಂಬಂಧ ಚುನಾವಣೆ ಆಯೋಗ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ. ತಕ್ಷಣವೇ ಚುನಾವಣೆ ನಡೆಸಲು ಆಯೋಗ ತೀರ್ಮಾನಿಸಿದ್ರೂ ಅದನ್ನು ಎದುರಿಸಲು ಬಿಜೆಪಿ ಸಿದ್ಧವಿದೆ. ಯಾವಾಗ ಬೇಕಾದರೂ ಚುನಾವಣೆ ಆಗಲಿ, ಅದಕ್ಕೆ ಹೆದರುವ ಜನ ನಾವಲ್ಲ. ಕಾಂಗ್ರೆಸಿನಲ್ಲಿ ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ಗುಂಪುಗಾರಿಕೆ ಜಾಸ್ತಿ ಆಗಿದೆ. ನೆಲೆ ಕಳೆದುಕೊಂಡಿರುವ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಆರೋಪ ಮಾಡುವುದನ್ನು ಬಿಟ್ಟು ಬೇರೆ ಏನೂ ಗೊತ್ತಿಲ್ಲ. ಅವಧಿ ಮುಗಿದ ಮೇಲೂ ಆರು ತಿಂಗಳ ಚುನಾವಣೆಗೆ ಸಮಯಾವಕಾಶ ಇದೆ. ಆಡಳಿತಾಧಿಕಾರಿ ನೇಮಕ, ಈಗಿರುವ ಸಮಿತಿ ಮುಂದುವರೆಸಬೇಕೋ ಎಂಬ ಬಗ್ಗೆ ಚರ್ಚೆಗಳು ನಡೆದಿವೆ ಎಂದರು.