ಬೆಳಗಾವಿ: (ಘಟಪ್ರಭಾ) ಪಟ್ಟಣದಲ್ಲಿ ಪುನಶ್ಚೇತನಗೊಳಿಸಲಾದ ಕಾಂಗ್ರೆಸ್ ಸೇವಾದಳದ ತರಬೇತಿ ಕೇಂದ್ರಕ್ಕೆ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಪ್ರಧಾನ ಕಾರ್ಯದರ್ಶಿ ಪಿ.ವಿ.ಮೋಹನ್ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಘಟಪ್ರಭಾದ ಡಾ.ನಾ.ಸು.ಹರ್ಡೀಕರ್ ಸಮಾಧಿ ಸ್ಥಳದಲ್ಲಿ ಸೇವಾದಳ ತರಬೇತಿ ಕೇಂದ್ರ ಸ್ಥಾಪಿಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಇದನ್ನು ಪವಿತ್ರ ಜಾಗವೆಂದು ನಂಬುತ್ತಾರೆ. ರಾಷ್ಟ್ರಮಟ್ಟದಲ್ಲಿ ಈ ಕ್ಷೇತ್ರ ಪ್ರಸಿದ್ಧಿ ಆಗಬೇಕೆಂಬ ಅಭಿಲಾಷೆಯಿದ್ದು, ಅಕ್ಟೋಬರ್ 2 ರಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಮಾಜಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೂ ವರ್ಚ್ಯುವಲ್ ಮೂಲಕ ಉದ್ಘಾಟನೆಗೆ ಮನವಿ ಮಾಡಿದ್ದೇವೆ ಎಂದರು.
ಇದೇ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ರಾಷ್ಟ್ರದಲ್ಲಿಯೇ ಪ್ರಥಮ ಬಾರಿಗೆ ಡಾ.ನಾ.ಸು.ಹರ್ಡಿಕರ್ ಪ್ರಾರಂಭಿಸಿದ ರಾಷ್ಟ್ರೀಯ ಸೇವಾದಳದ ಪುಣ್ಯ ಭೂಮಿಯಲ್ಲಿ ಪಕ್ಷದ ನಾಯಕರು ಅನುದಾನ ನೀಡಿ, ಮಾದರಿ ತರಬೇತಿ ಕೇಂದ್ರ ಮಾಡುವಲ್ಲಿ ನಿರತರಾಗಿದ್ದಾರೆ. ಇಲ್ಲಿ ಯಾವುದೇ ಧರ್ಮ, ಜಾತಿ ಬಗ್ಗೆ ತರಬೇತಿ ಇರಲ್ಲ. ದೇಶಕ್ಕೆ ಕಾಂಗ್ರೆಸ್ ನೀಡಿದ ಕೊಡುಗೆ, ಸ್ವಾಮಿ ವಿವೇಕಾನಂದ, ಮಾಜಿ ಪ್ರಧಾನಿ ನೆಹರೂ, ಮಹಾತ್ಮ ಗಾಂಧಿ ವಿಚಾರಧಾರೆಗಳ ಕುರಿತು ತರಬೇತಿ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಗೋಕಾಕ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಡಾಂಗೆ, ಇಮ್ರಾಣ ತಪಕೀರೆ, ಸುನೀಲ ಹಣಮನ್ನವರ, ಜಯಶ್ರೀ ಮಾಳಗೆ ಇದ್ದರು.