ಬೆಳಗಾವಿ: ಜಿಲ್ಲೆಗೆ ಹೊಸದಾಗಿ ಮಂಜೂರಾಗಿರುವ ಕೋವಿಡ್-19 ಪರೀಕ್ಷಾ ಪ್ರಯೋಗಾಲಯ ಆವರಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಿ ಪರಿಶೀಲಿಸಿದರು.
ಇಲ್ಲಿನ ನೆಹರೂ ನಗರದ ಕೆ. ಎಲ್. ಇ. ಆಸ್ಪತ್ರೆ ಎದುರಿಗಿರುವ ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಸ್ಥಾಪಿಸಲಾಗಿರುವ ಕೋವಿಡ್-19 ಪರೀಕ್ಷಾ ಪ್ರಯೋಗಾಲಯ ಆರಂಭಕ್ಕೆ ಈಗಾಗಲೇ ಅನುಮತಿ ದೊರೆತಿದೆ. ಈ ಹಿನ್ನೆಲೆ ಮುಂದಿನ ಪ್ರಕ್ರಿಯೆ ಕುರಿತು ಸಂಸ್ಥೆಯ ನಿರ್ದೇಶಕರ ಜೊತೆ ಸಚಿವರು ಚರ್ಚೆ ನಡಸಿ, ಪ್ರಯೋಗಾಲಯಕ್ಕೆ ಅಗತ್ಯವಿರುವ ಸಾಮಗ್ರಿ ಮತ್ತು ಕಿಟ್ ತರಿಸಿಕೊಂಡು ತಕ್ಷಣವೇ ಪ್ರಯೋಗಾಲಯ ಆರಂಭಿಸಬೇಕು ಎಂದು ಸೂಚಿಸಿದರು.
ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ್ ಅಂಗಡಿ ಮಾತನಾಡಿ, ಪ್ರಯೋಗಾಲಯ ಆರಂಭಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಎಲ್ಲ ನೆರವು ನೀಡಲಾಗಿದೆ. ಯಾವುದೇ ರೀತಿಯ ಹೆಚ್ಚಿನ ನೆರವು ಅಗತ್ಯವಿದ್ದರೆ ಕೂಡಲೇ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಆನಂತರ, ಐಸಿಎಂಆರ್-ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ದೇವಪ್ರಸಾದ ಚಟ್ಟೋಪಾಧ್ಯಾಯ ಮಾತನಾಡಿ, ಗಂಟಲು ದ್ರವ ಮಾದರಿ ಪರೀಕ್ಷೆಯ ಕಿಟ್, ಮತ್ತಿತರ ಅಗತ್ಯ ಸಾಮಗ್ರಿಗಳು ಸೋಮವಾರ ಬರಲಿದ್ದು, ಅದು ಬಂದ ಬಳಿಕ ತಕ್ಷಣವೇ ಪರೀಕ್ಷೆ ಆರಂಭಿಸಲಾಗುವುದು. ನೂತನ ಪ್ರಯೋಗಾಲಯ ಆರಂಭಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.