ಬೆಳಗಾವಿ: ಅತೃಪ್ತ ಶಾಸಕರ ರಾಜೀನಾಮೆಯಿಂದ ಉರುಳುವ ಭೀತಿಯಲ್ಲಿರುವ ಮೈತ್ರಿ ಸರ್ಕಾರ ಉಳಿಸು ತಾಯಿಯೇ ಅಂತಾ ಸಿಎಂ ರಾಜಕೀಯ ಕಾರ್ಯದರ್ಶಿ ಎನ್ ಹೆಚ್ ಕೋನರೆಡ್ಡಿ ಅವರು ಇಂದು ಸವದತ್ತಿಯ ಶ್ರೀರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಹೆಚ್ ಡಿ ಕುಮಾರಸ್ವಾಮಿ ಸಿಎಂ ಆಗಿ ಮುಂದುವರೆಯಬೇಕು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಇರಬೇಕು ಎಂದು ದೇವಿಗೆ ಕುಟುಂಬ ಸಮೇತರಾಗಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಎನ್ ಹೆಚ್ ಕೋನರೆಡ್ಡಿ ಅವರು, ನಾನು ಮೊದಲಿನಿಂದಲೂ ಸವದತ್ತಿಯ ಶ್ರೀರೇಣುಕಾ ಯಲ್ಲಮ್ಮದೇವಿಗೆ ನಡೆದುಕೊಳ್ಳುತ್ತೇನೆ. ಧಾರ್ಮಿಕ ವಿಚಾರದಲ್ಲಿ ನಂಬಿಕೆ ಇಟ್ಟುಕೊಂಡ ವ್ಯಕ್ತಿ ನಾನು. ಹೆಚ್ ಡಿ ಕುಮಾರಸ್ವಾಮಿ ಅವರು ಸಿಎಂ ಆಗಿ ಮುಂದುವರೆಯಬೇಕು. ಮೈತ್ರಿ ಸರ್ಕಾರ ಉಳಿಯಬೇಕು ಎಂದು ದೇವಿಯಲ್ಲಿ ಕೇಳಿಕೊಂಡಿದ್ದೇನೆ. ಸಿಎಂ ಕುಮಾರಸ್ವಾಮಿ ಅವರು ರಾಜ್ಯದ ಉಳಿವಿಗಾಗಿ ಹಾಗೂ ರಾಜ್ಯದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ ಅಂತಾ ಹೇಳಿದರು. ಶ್ರೀರೇಣುಕಾ ಯಲ್ಲಮ್ಮ ದೇವಿ ಟ್ರಸ್ಟ್ ಸಮಿತಿಯಿಂದ ಕೋನರೆಡ್ಡಿ ಕುಟುಂಬ ಸದಸ್ಯರಿಗೆ ಸನ್ಮಾನಿಸಲಾಯಿತು.