ಬೆಳಗಾವಿ: ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಸೊಕ್ಕಿನಿಂದ ಮೆರೆಯುತ್ತಿದ್ದ ಬ್ರಿಟಿಷರಿಗೆ ಮೊದಲ ಸೋಲಿನ ರುಚಿ ತೋರಿಸಿದ ಕೆಚ್ಚೆದೆಯ ಸಂಸ್ಥಾನ ಇದು. ಶೌರ್ಯ, ಸಾಹಸ, ಸ್ವಾಭಿಮಾನ, ಸ್ವಾತಂತ್ರ್ಯ, ತ್ಯಾಗ, ಬಲಿದಾನಗಳೇ ಇಲ್ಲಿನ ಸೈನಿಕರ ಜೀವಾಳ. ಪುರುಷಪ್ರಧಾನ ಸಮಾಜದಲ್ಲಿ ಓರ್ವ ಮಹಿಳೆ ಆಡಳಿತದ ಚುಕ್ಕಾಣಿ ಹಿಡಿದ ವೀರವನಿತೆಯ ನೆಲ.
ಸ್ವಾತಂತ್ರ್ಯ ಸಂಗ್ರಾಮದ ಕಿಡಿ ಹೊತ್ತಿಸಿ, ಬ್ರಿಟಿಷರನ್ನು ಪತರಗುಟ್ಟುವಂತೆ ಮಾಡಿದ್ದು ದಿಟ್ಟ ಹೋರಾಟಗಾರ್ತಿ ಚೆನ್ನಮ್ಮನ ಕಿತ್ತೂರು ಸಂಸ್ಥಾನ. ಇದೇ ಅಕ್ಟೋಬರ್ 23, 24 ಮತ್ತು 25ರಂದು ಮೂರು ದಿನಗಳ ಕಾಲ ನಡೆಯಲಿರುವ "ಕಿತ್ತೂರು ಉತ್ಸವ"ದ ಅಂಗವಾಗಿ ಸಾಮ್ರಾಜ್ಯದ ಇತಿಹಾಸದ ಬಗ್ಗೆ ಈಟಿವಿ ಭಾರತದ ವಿಶೇಷ ವರದಿ.
ನಮ್ಮ ನಾಡಿನಲ್ಲಿ ಅನೇಕ ಸಂಸ್ಥಾನಗಳು ಆಡಳಿತ ನಡೆಸಿವೆ. ಆದರೆ, ಅವುಗಳ ಸಾಲಿನಲ್ಲಿ ಭಿನ್ನ ಮತ್ತು ಮಾದರಿಯಾಗಿ ನಿಲ್ಲುವುದು ಕಿತ್ತೂರು ಸಂಸ್ಥಾನ. ಅಧಿಕಾರದ ಆಸೆಗಾಗಿ ಬ್ರಿಟಿಷರ ಜೊತೆಗೆ ಕೈ ಜೋಡಿಸಿದ ಅನೇಕರ ಮಧ್ಯ ಸ್ವಾತಂತ್ರ್ಯದ ಕಹಳೆ ಊದಿದ ಅಪರೂಪದ ಪುಟ್ಟ, ದಿಟ್ಟ ಸಂಸ್ಥಾನವಿದು. ತೊಟ್ಟಿಲು ತೂಗುವ ಕೈ ಜಗತ್ತನ್ನೂ ಆಳಬಹುದು ಎಂಬುದನ್ನು ಸಾಧಿಸಿ ತೋರಿಸಿದ ವೀರರಾಣಿ ಚೆನ್ನಮ್ಮ ಆಳ್ವಿಕೆ ನಡೆಸಿದ ಸಾಮ್ರಾಜ್ಯ.

ಸಂಸ್ಥಾನದ ಉಗಮ ಹೇಗಾಯಿತು?: ಹಿರೇಮಲ್ಲಶೆಟ್ಟಿ ಮತ್ತು ಚಿಕ್ಕಮಲ್ಲಶೆಟ್ಟಿ ಎಂಬ ಸಹೋದರರು ಕಿತ್ತೂರು ಸಂಸ್ಥಾನದ ಸ್ಥಾಪಕರು. ಇವರು ಶಿವಮೊಗ್ಗ ಜಿಲ್ಲೆಯ ಸಾಗರ ಪ್ರಾಂತ್ಯಕ್ಕೆ ಸೇರಿದವರು ಎಂದು ಕೆಲವರು ವಾದಿಸುತ್ತಾರೆ. ಆದರೆ, ಭೀಮಾ ಮತ್ತು ಕೃಷ್ಣಾ ನದಿ ಮಧ್ಯದಲ್ಲಿ ಬರುವ ಸಗರನಾಡು ಪ್ರಾಂತಕ್ಕೆ ಇವರು ಸೇರಿದವರು. 16ನೇ ಶತಮಾನದಲ್ಲಿ ಬಿಜಾಪುರ ಸುಲ್ತಾನರ ಗವರ್ನರ್ ಆಗಿದ್ದ ಅಸದಖಾನ್ ಲಾರಿಗೆ ಬೆಳಗಾವಿಯಲ್ಲಿನ ಕೋಟೆ ದುರಸ್ಥಿ ಮಾಡುವಾಗ ಸಾಮಗ್ರಿಗಳನ್ನು ಪೂರೈಸಿ ಸಹಾಯ ಮಾಡಿದ ಕಾರಣಕ್ಕಾಗಿ, ಸಂಪಗಾವ ಪ್ರದೇಶವನ್ನು ಬಳುವಳಿಯಾಗಿ ಆ ಸಹೋದರರಿಗೆ ನೀಡುತ್ತಾರೆ. ಸಂಪಗಾವದಿಂದ 1585ರಿಂದ ಕಿತ್ತೂರು ಸಂಸ್ಥಾನದ ಆಡಳಿತ ಪ್ರಾರಂಭವಾಗುತ್ತದೆ. ಆ ಬಳಿಕ ಸಂಪಗಾವಿಯಿಂದ ಕಿತ್ತೂರಿಗೆ ತಮ್ಮ ಆಡಳಿತ ಕೇಂದ್ರವನ್ನು ಸ್ಥಳಾಂತರಿಸುತ್ತಾರೆ. 1585ರಿಂದ 1824ರ ಅವಧಿವರೆಗೆ 239 ವರ್ಷಗಳ ಕಾಲ 12 ರಾಜರು ಆಡಳಿತ ಮಾಡಿದ್ದಾರೆ.
5ನೇ ದೊರೆ ಅಲ್ಲಪ್ಪಗೌಡ ಕಟ್ಟಿದ ಕೋಟೆ: ಕಿತ್ತೂರು ಕೋಟೆ ಮೂರು ಹಂತದಲ್ಲಿ ನಿರ್ಮಾಣವಾಗಿದೆ. ಇದು ಮೂರು ಅಂತಸ್ಥಿನ, ಮೂರು ಸುತ್ತಿನ ಕೋಟೆ. 1660ರಿಂದ 1692ವರೆಗೆ ಆಳ್ವಿಕೆ ಮಾಡಿದ ಐದನೇ ರಾಜ ಅಲ್ಲಪ್ಪಗೌಡ ದೇಸಾಯಿ ಕಾಲದಲ್ಲಿ ಈ ಕೋಟೆ ನಿರ್ಮಾಣಗೊಂಡಿದೆ. ಅಲ್ಲದೇ ಸಂಸ್ಥಾನಕ್ಕೆ ಮಾರ್ಗದರ್ಶನ ಮಾಡುತ್ತಿದ್ದ ಕಲ್ಮಠ ಮತ್ತು ಚೌಕಿಮಠಗಳನ್ನೂ ಇದೇ ಅವಧಿಯಲ್ಲಿ ನಿರ್ಮಿಸಲಾಗಿದೆ. ಉಸುಕು, ಬೆಲ್ಲ, ಸುಣ್ಣ ಮಿಶ್ರಣ ಮಾಡಿದ ಗಚ್ಚಿನಿಂದ ಕೋಟೆ ಕಟ್ಟಲಾಗಿದೆ. ಪಶ್ಚಿಮಘಟ್ಟದ ಅಳ್ನಾವರ ಭಾಗದಲ್ಲಿ ಬೆಳೆಯುವ ಶ್ರೇಷ್ಠ ಗುಣಮಟ್ಟದ ಸಾಗವಾನಿ ಮರಗಳ ಕಟ್ಟಿಗೆ ಬಳಸಲಾಗಿದೆ. ಕೌಶಲ್ಯ, ನಾವಿನ್ಯತೆ, ಚಾಕಚಕ್ಯತೆ ಎಷ್ಟಿತ್ತು ಎಂಬುದು ತಿಳಿಯುತ್ತದೆ ಎಂದು ಇತಿಹಾಸಕಾರ ಮಹೇಶ ಚನ್ನಂಗಿ ಈಟಿವಿ ಭಾರತಕ್ಕೆ ತಿಳಿಸಿದರು.

ಬ್ರಿಟಿಷರಿಗೆ ಸಿಂಹಸ್ವಪ್ನ ಚೆನ್ನಮ್ಮ: ಪತಿ ಮಲ್ಲಸರ್ಜರ ಅಗಲಿಕೆ, ನಂತರ ಅಧಿಕಾರಕ್ಕೆ ಬಂದ ಅಕ್ಕ ರುದ್ರಮ್ಮನ ಪುತ್ರ ಶಿವಲಿಂಗರುದ್ರಸರ್ಜರ ನಿಧನದ ಬಳಿಕ ಸಂಸ್ಥಾನದ ಜವಾಬ್ದಾರಿ ರಾಣಿ ಚೆನ್ನಮ್ಮ ವಹಿಸಿಕೊಳ್ಳುತ್ತಾರೆ. ಅದೇ ಸಮಯದಲ್ಲಿ ದಂಡೆತ್ತಿ ಬಂದ ಧಾರವಾಡ ಜಿಲ್ಲಾಧಿಕಾರಿ ಥ್ಯಾಕರೆ ಹತ್ಯೆಯಾಗುತ್ತದೆ. ಇಡೀ ದೇಶದಲ್ಲೇ ಬ್ರಿಟಿಷರಿಗೆ ಮೊದಲ ಸೋಲು ಇದಾಗುತ್ತದೆ. ಅಲ್ಲದೇ ಸ್ವಾತಂತ್ರ್ಯ ಸಂಗ್ರಾಮದ ಕಿಡಿ ಕಿತ್ತೂರಿನಿಂದಲೇ ಹತ್ತುತ್ತದೆ.
ಆಧುನಿಕ ತಂತ್ರಜ್ಞಾನ ಬಳಕೆ: ನೀರು ಸರಬರಾಜು ಮಾಡಲು ತಾಮ್ರದ ಕೊಳವೆಯನ್ನು ಬಳಸಲಾಗುತ್ತಿತ್ತು. ತಾಮ್ರದಲ್ಲಿ ಶೇಖರಿಸಿದ ನೀರು ಆರೋಗ್ಯಕ್ಕೆ ಒಳ್ಳೆಯದು ಎಂಬ ದೂರದೃಷ್ಟಿ ಅಲ್ಲಪ್ಪಗೌಡ ಹೊಂದಿದ್ದರು. ಅಲ್ಲದೇ ಸಂಸ್ಥಾನದ ರಾಜರು ಹೊರಗಿನ ನೀರು ಕುಡಿದರೆ ವಿಷಪ್ರಾಷನ ಆಗಬಹುದು ಎಂಬ ಆತಂಕದಿಂದ ಕೋಟೆಯ ಒಳಗೆ ನಿರ್ಮಿಸಿದ್ದ ಮೂರು ಭಾವಿಗಳ ನೀರನ್ನೇ ಬಳಸಲಾಗುತ್ತಿತ್ತು. ಇನ್ನು ಕೋಟೆಯ ಒಂದು ತೊಟ್ಟಿಯಲ್ಲಿ ನೀರು ಹಾಕಿದರೆ ಅದು ಇಡೀ ಕೋಟೆಗೆ ಸರಬರಾಜು ಆಗುತ್ತಿತ್ತು. ಕೋಟೆಯೊಳಗೆ ಅಡುಗೆ ಮನೆ, ಊಟದ ಮನೆ, ಪೂಜಾ ಮನೆ, ಸಭಾಗೃಹ, ಅತಿಥಿ ಕೋಣೆಗಳು, ಶೌಚಾಲಯ, ಪೂರ್ವ ದಿಕ್ಕಿನಲ್ಲಿ ವಿಶಾಲವಾದ ದರ್ಬಾರ್ ಹಾಲ್, ಧೃವ ನಕ್ಷತ್ರ ವೀಕ್ಷಣೆ, ಬೃಹದಾಕಾರದ ಕಂಬಗಳಿಂದ ಕೂಡಿದ ಆಕರ್ಷಕ ಸುಂದರ ಅರಮನೆ ಇದಾಗಿತ್ತು. ಆದರೆ, ಬ್ರಿಟಿಷರ ದಾಳಿಯಿಂದಾಗಿ ಕೋಟೆ ಹಾಳಾದ ಸ್ಥಿತಿಯಲ್ಲಿದೆ.

ನಾಡಿನ ಮಠಗಳ ನಿರ್ಮಾಣಕ್ಕೆ ಕೋಟೆಯ ಕಟ್ಟಿಗೆ ಬಳಕೆ: 1824ರ ಮೊದಲನೇ ಯುದ್ಧದಲ್ಲಿ ಕೋಟೆಯ ಮೇಲೆ ದಂಡೆತ್ತಿ ಬಂದ ಥ್ಯಾಕರೆಯನ್ನು ಸರ್ದಾರ ಗುರುಶಿದ್ದಪ್ಪ, ಅಮಟೂರ ಬಾಳಪ್ಪ, ಸಂಗೊಳ್ಳಿ ರಾಯಣ್ಣ, ಬಿಚ್ಚುಗತ್ತಿ ಚನ್ನಬಸಪ್ಪ ಸೇರಿ ಅನೇಕರ ಶ್ರಮದಿಂದ ಹೊಡೆದುರುಳಿಸಿ ಮೊದಲ ಗೆಲುವು ಸಾಧಿಸುತ್ತಾರೆ. ಆದರೆ, ಎರಡನೇ ಯುದ್ಧದಲ್ಲಿ ಯಾವುದೇ ದೇಶೀಯ ಸಂಸ್ಥಾನಗಳು ಕಿತ್ತೂರಿನ ಪರವಾಗಿ ನಿಲ್ಲದ ಹಾಗೆ ಒತ್ತಡ ಹೇರಿ, ಸುಮಾರು 25 ಸಾವಿರ ಸೈನಿಕರೊಂದಿಗೆ ಬ್ರಿಟಿಷರು ದಾಳಿ ಮಾಡುತ್ತಾರೆ. ಆಗ ಕಿತ್ತೂರು ಕೋಟೆ ಸ್ವಲ್ಪ ಭಾಗ ಧ್ವಂಸ ಆಗುತ್ತದೆ. ಹುಬ್ಬಳ್ಳಿ ಮೂರು ಸಾವಿರಮಠ, ಅಂಕಲಗಿ ಅಡವಿ ಸಿದ್ದೇಶ್ವರ ಮಠ, ಅಮ್ಮಿನಭಾವಿಯ ಹಿರೇಮಠ, ನವನಗರದ ಹಿರೇಮಠ, ಹುಕ್ಕೇರಿ ಹಿರೇಮಠ, ರಬಕವಿಯ ಶಂಕರಲಿಂಗೇಶ್ವರ ದೇವಸ್ಥಾನ, ಬೆಳಗಾವಿಯ ಖಡೇಬಜಾರ್, ಚವ್ಹಾಟ ಗಲ್ಲಿಯ ಕೆಲ ಮನೆಗಳು, ಧಾರವಾಡದ ಯಾಲಕ್ಕಿಶೆಟ್ಟರ ಕಾಲೊನಿಯ ಕೆಲ ಮನೆಗಳು ಸೇರಿದಂತೆ ಇನ್ನು ಹಲವು ಕಡೆ ಮಠ, ಮಾನ್ಯಗಳನ್ನು ಕಟ್ಟಲು ಇದೇ ಕೋಟೆಯ ಕಟ್ಟಿಗೆಗಳನ್ನು ಬಳಸಲಾಗಿದೆ ಎಂದು ಇತಿಹಾಸಕಾರ ಮಹೇಶ ಚನ್ನಂಗಿ ಮಾಹಿತಿ ನೀಡಿದರು. ಒಟ್ಟಿನಲ್ಲಿ ದೈತ್ಯ ಬ್ರಿಟಿಷರಿಗೆ ಸೆಡ್ಡು ಹೊಡೆದ ಪುಟ್ಟ ಕಿತ್ತೂರು ಸಂಸ್ಥಾನದ ಧೈರ್ಯ, ಶೌರ್ಯ ಇತಿಹಾಸದ ಪುಟಗಳಲ್ಲಿ ಎಂದೆಂದಿಗೂ ಅಜರಾಮರ.
ಇದನ್ನೂ ಓದಿ: ಕಿತ್ತೂರು ಉತ್ಸವದ ಪೂರ್ವಭಾವಿ ಸಭೆ: 3 ದಿನ ಅದ್ಧೂರಿ ಉತ್ಸವ ಎಂದ ಸಚಿವ ಸತೀಶ್ ಜಾರಕಿಹೊಳಿ