ಬೆಳಗಾವಿ: ಮೂರು ದಿನಗಳ ರಾಜ್ಯ ಮಟ್ಟದ ಕಿತ್ತೂರು ಉತ್ಸವದ ಅಂಗವಾಗಿ ಕೋಟೆ ಆವರಣದಲ್ಲಿ ಹಮ್ಮಿಕೊಂಡಿರುವ ಕೈಗಾರಿಕಾ ವಸ್ತುಗಳ ಪ್ರದರ್ಶನಕ್ಕೆ ಮೊದಲ ದಿನ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿತು. ಈ ಕುರಿತು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಸಹಾಯಕ ನಿರ್ದೇಶಕ ಎ.ಐ.ಪಠಾಣ ಮಾಹಿತಿ ನೀಡಿದ್ದಾರೆ.
120 ಮಳಿಗೆಗಳಲ್ಲಿ ಬೀಜ, ಗೊಬ್ಬರ, ಔಷಧ ಸಿಂಪಡಣೆ, ಕಬ್ಬುಗಳ ತಳಿ, ಹೊಸ ಟ್ರ್ಯಾಕ್ಟರ್ ಸೇರಿ ಕೃಷಿ ಸಾಮಗ್ರಿಗಳು, ಆಹಾರ ಉತ್ಪನ್ನಗಳು, ಖಾದಿ ಬಟ್ಟೆಗಳು, ಸುಧಾರಿತ ಕಬ್ಬಿನ ಸಸಿಗಳು, ಮಹಿಳೆಯರ ಅಲಂಕಾರಿಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿದೆ. ಕೃಷಿ, ತೋಟಗಾರಿಕೆ, ಆರೋಗ್ಯ, ಮೀನುಗಾರಿಕೆ, ಅರಣ್ಯ, ಗ್ರಾಮೀಣಾಭಿವೃದ್ಧಿ ನರೇಗಾ ಯೋಜನೆಯ ವಿವಿಧ ಸೌಲಭ್ಯಗಳು ಸೇರಿ ಇನ್ನಿತರ ಇಲಾಖೆಗಳ ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಅಧಿಕಾರಿಗಳು ಜನರಿಗೆ ಮಾಹಿತಿ ನೀಡುತ್ತಿದ್ದಾರೆ. 12 ಮಹಿಳಾ ಸ್ವಸಹಾಯ ಸಂಘಗಳಿಗೆ ಉಚಿತವಾಗಿ ಮಳಿಗೆ ನೀಡಿದ್ದೇವೆ. ಮೊದಲ ದಿನ ಬೆಳಿಗ್ಗೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ. ಇನ್ನೆರಡು ದಿನ ವಸ್ತು ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.
ಚನ್ನಮ್ಮ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲರ ಮುತುವರ್ಜಿಯಿಂದ ರಿಯಾಯಿತಿ ದರದಲ್ಲಿ ಮನೆ ಹಿಟ್ಟಿನ ಗಿರಣಿ ವಿತರಣಾ ಯೋಜನೆಯಡಿ ಹಿಟ್ಟಿನ ಗಿರಣಿ ಮಾರಾಟಕ್ಕಿಟ್ಟಿರುವುದು ವಸ್ತು ಪ್ರದರ್ಶನದ ಮತ್ತೊಂದು ವಿಶೇಷತೆ. ಇಲ್ಲಿ 1 ಎಚ್.ಪಿ ಯಿಂದ 5 ಎಚ್.ಪಿ ವರೆಗೆ ಮನೆ ಹಿಟ್ಟಿನ ಗಿರಣಿ ಮಾರಾಟಕ್ಕಿಡಲಾಗಿದೆ. 1 ಎಚ್.ಪಿ. 25 ಸಾವಿರ ರೂ. ದರವಿದ್ದು, ರಿಯಾಯಿತಿ 12,500 ರೂ. ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಕಿತ್ತೂರು ಶಾಸಕರು ಕಾರಣ ಎಂದು ಮಾರಾಟಗಾರ ಜ್ಞಾನದೇವ ತಿಳಿಸಿದರು.
ಕಿತ್ತೂರು ಉತ್ಸವ ನಮ್ಮ ನಾಡಿನ ಹೆಮ್ಮೆ. ಇದರಲ್ಲಿ ಭಾಗಿಯಾಗಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ಬೆಳಿಗ್ಗೆ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಈಗ ಒಂದಿಷ್ಟು ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತಿದ್ದೇವೆ ಎಂದು ಬೈಲಹೊಂಗಲದಿಂದ ಉತ್ಸವಕ್ಕೆ ಬಂದಿದ್ದ ಡಾ.ದೀಪಾ ಎಂಬವರು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಕಿತ್ತೂರು ಉತ್ಸವ ಮೆರವಣಿಗೆಗೆ ಚಾಲನೆ ನೀಡಿ ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು. ಬಳಿಕ ಚನ್ನಮ್ಮ ಪುತ್ಥಳಿಗೆ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಸಂಸದೆ ಮಂಗಲ ಅಂಗಡಿ, ಶಾಸಕರಾದ ಬಾಬಾಸಾಹೇಬ ಪಾಟೀಲ, ಮಹಾಂತೇಶ ಕೌಜಲಗಿ, ಆಸೀಫ್ ಸೇಠ್ ಸೇರಿ ಮತ್ತಿತರ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿ.ಪಂ.ಸಿಇಒ ಹರ್ಷಲ್ ಭೊಯರ್ ಸೇರಿ ಮತ್ತಿತರ ಅಧಿಕಾರಿಗಳು ಇದ್ದರು.
ಇದನ್ನೂ ಓದಿ: ಚನ್ನಮ್ಮನ ಕಿತ್ತೂರು ಉತ್ಸವಕ್ಕೆ ಅದ್ಧೂರಿ ಚಾಲನೆ: ಮೆರವಣಿಗೆಗೆ ಕಲಾ ತಂಡಗಳ ಮೆರುಗು