ಬೆಳಗಾವಿ: ಕೋವಿಡ್ ಸೋಂಕಿತರ ಆರೈಕೆಗಾಗಿ ಅವರ ಜತೆಗೆ ಆಸ್ಪತ್ರೆಯ ಕಾರಿಡಾರ್ನಲ್ಲಿ ಬಿಡಾರ ಹೂಡಿದ್ದ ರೋಗಿಗಳ ಕುಟುಂಬದ ಸದಸ್ಯರ(ಅಟೆಂಡರ್)ನ್ನು ಹೊರಗೆ ಕಳಿಸುವ ಮೂಲಕ ಬಿಮ್ಸ್ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ.
ಬಿಮ್ಸ್ ಮುಖ್ಯ ಆಡಳಿತಾಧಿಕಾರಿ ಆಗಿರುವ ಕೆಎಎಸ್ ಅಧಿಕಾರಿ ಸಯೀದಾ ಆಫ್ರಿನ್ ಬಾನು ಬಳ್ಳಾರಿ ಸ್ವತಃ ಪಿಪಿಇ ಕಿಟ್ ಧರಿಸಿ ಸೋಮವಾರ ಬಿಮ್ಸ್ ಕೋವಿಡ್ ವಾರ್ಡುಗಳಲ್ಲಿ ರೌಂಡ್ಸ್ ಹಾಕುವ ಮೂಲಕ ರೋಗಿಗಳ ಆರೈಕೆಗಾಗಿ ಆಸ್ಪತ್ರೆಯ ಕಾರಿಡಾರ್ಗಳಲ್ಲಿದ್ದ ಕುಟುಂಬದ ಸದಸ್ಯರನ್ನು ಹೊರಗೆ ಕಳುಹಿಸಿದರು.
ಉಪಾಹಾರ, ಔಷಧ ನೀಡುವ ನೆಪದಲ್ಲಿ ಕೋವಿಡ್ ವಾರ್ಡುಗಳನ್ನು ಪ್ರವೇಶಿಸುತ್ತಿದ್ದ ರೋಗಿಗಳ ಸಂಬಂಧಿಕರ ಮನವೊಲಿಸುವ ಪ್ರಯತ್ನ ಮಾಡಿದರು. ರೋಗಿಗಳಿಗೆ ಉಸಿರಾಟದ ತೊಂದರೆಯಿದೆ ಎಂಬ ನೆಪವೊಡ್ಡಿ ಕೆಲವರು ವಾರ್ಡ್ಗಳಲ್ಲಿ ಉಳಿಯುವ ಪ್ರಯತ್ನ ಮಾಡಿದರಾದರೂ ಪೊಲೀಸ್ ಸಿಬ್ಬಂದಿ ನೆರವಿನ ಮೂಲಕ ಅವರನ್ನು ಕೂಡ ಹೊರಗೆ ಕಳಿಸುವಲ್ಲಿ ಸಯೀದಾ ಆಫ್ರಿನ್ ಬಾನು ಯಶಸ್ವಿಯಾದರು.
ಇದೇ ಸಂದರ್ಭದಲ್ಲಿ ಕೋವಿಡ್ ವಾರ್ಡ್ಗಳಲ್ಲಿ ಸಂಚರಿಸಿದ ಅವರು, ಸೋಂಕಿತರ ಆರೋಗ್ಯವನ್ನು ವಿಚಾರಿಸುವ ಮೂಲಕ ಅವರ ಮನೋಬಲವನ್ನು ಹೆಚ್ಚಿಸಿದರು. ಪಿಪಿಇ ಕಿಟ್ ಇಲ್ಲದೇ ಕೋವಿಡ್ ವಾರ್ಡ್ಗಳಲ್ಲಿ ಪ್ರವೇಶಿಸಿದರೆ ಅಂತಹವರಿಂದ ಕುಟುಂಬದ ಇತರ ಸದಸ್ಯರಿಗೂ ಸೋಂಕು ತಗಲುವ ಅಪಾಯವಿರುತ್ತದೆ. ಆದ್ದರಿಂದ ರೋಗಿಗಳ ಜತೆ ಯಾರೂ ಇರುವ ಅಗತ್ಯವಿಲ್ಲ. ಸರ್ಕಾರದ ಮಾರ್ಗಸೂಚಿ ಪ್ರಕಾರ ಎಲ್ಲರಿಗೂ ಉತ್ತಮ ಊಟೋಪಹಾರ ನೀಡಲಾಗುತ್ತಿದೆ. ಚಿಕಿತ್ಸೆ ಸಂಬಂಧಿಸಿದಂತೆ ವೈದ್ಯರು ಹಾಗೂ ನರ್ಸ್ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಕುಟುಂಬದ ಸದಸ್ಯರು ರೋಗಿಗಳ ಜತೆ ಇರುವ ಅಗತ್ಯವಿಲ್ಲ ಎಂದು ಹೇಳಿದ್ರು. ಪೊಲೀಸ್ ಹಾಗೂ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಜತೆಗೆ ಕಾರ್ಯಾಚರಣೆ ನಡೆಸಿದರೂ ಅನೇಕ ಜನರು ಆಸ್ಪತ್ರೆಯ ಕಾರಿಡಾರ್ನಿಂದ ಹೊರಹೋಗಲು ವಿರೋಧ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಅಧೀಕ್ಷಕ ಡಾ.ಗಿರೀಶ್ ದಂಡಗಿ, ಡಾ.ಕೇಶವ್, ಪೊಲೀಸ್ ಇನ್ಸ್ಪೆಕ್ಟರ್ ಜಾವೀದ್ ಮುಶಾಪುರಿ ಉಪಸ್ಥಿತರಿದ್ದರು.