ಬೆಳಗಾವಿ: ದೇಶದಲ್ಲಿ ತಲಾವಾರು ಆದಾಯದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಸರ್ದಾರ್ ಮೈದಾನದಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮಹಿಳಾ ಸ್ವ ಸಹಾಯ ಬೆಳೆಯುತ್ತಿರುವುದು ಖುಷಿಯಾಗಿದೆ. ಪ್ರತಿಯೊಬ್ಬ ಕನ್ನಡಿಗರು ಗೌರವಪೂರ್ವಕವಾಗಿ ತಮ್ಮ ಕಾಯಕ ನಡೆಸಬೇಕು ಎಂಬುವುದು ನಮ್ಮ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದರು.
ಸದ್ಯ ದೇಶದಲ್ಲಿ ತಲಾವಾರು ಆದಾಯದಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ. ಸುಮಾರು ಎರಡು ಲಕ್ಷದವರೆಗೂ ತಲಾವಾರು ಆದಾಯವಿದೆ. ಶೇ.30ರಷ್ಟು ಜನ ಮಾತ್ರ ತಲಾವಾರು ಹೆಚ್ಚು ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ರಾಜ್ಯವನ್ನು ಕಟ್ಟಲು ಪ್ರತಿಯೊಬ್ಬರಿಗೂ ದುಡಿಯುವ ಅವಕಾಶ ನಾವು ಕೊಡಬೇಕಾಗಿದೆ. ಹಳ್ಳಿಯಲ್ಲಿರುವ ಮಹಿಳೆಯರ ಸಾಮೂಹಿಕ ಚಟುವಟಿಕೆಯನ್ನು ಕೌಶಲ್ಯ ಪೂರ್ಣವಾಗಿ ಮಾಡಬೇಕು ಎಂದು ಕರೆ ನೀಡಿದರು.
ಪ್ರಾರಂಭಿಕ ಹಣವನ್ನು ನೀಡಿ ಸರ್ಕಾರ ಸಹಾಯ ಮಾಡುವ ಕೆಲಸ ಮಾಡಲಿದೆ. ಸುಮ್ನೆ ನಾವು ಜನಪ್ರಿಯತೆಗೆ ಅನುದಾನ ಕೊಡುತ್ತಿಲ್ಲ. ನಿಮ್ಮ ಮೇಲೆ ಬಂಡವಾಳ ಹೂಡಿದರೆ ಅದು ಮತ್ತೆ ನಮಗೆ ಹಿಂದಿರುಗಿ ಬರುತ್ತದೆ. ನನ್ನದೇ ಆದ ಗಾರ್ಮೆಂಟ್ ಯೂನಿಟ್ ಇದ್ದು, ಉದ್ಯೋಗ ಕೊಡಲು ಅದನ್ನು ನಿರ್ಮಿಸಿದ್ದೇನೆ. ನನಗೆ ಹೆಣ್ಣು ಮಕ್ಕಳ ಮೇಲೆ ಹೆಚ್ಚಿನ ನಂಬಿಕೆ ಇದೆ. ಅವರು ನೈಸರ್ಗಿಕವಾಗಿ ಬಹಳ ಪರಿಶ್ರಮ ಪಡುತ್ತಾರೆ ಎಂದರು.
ಮಹಿಳೆಯರು ತಯಾರು ಮಾಡಿದ ವಸ್ತುಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುತ್ತೇವೆ. ಈ ಕೆಲಸವನ್ನು ಅಶ್ವತ್ಥನಾರಾಯಣ ಚೆನ್ನಾಗಿ ಮಾಡುತ್ತಾರೆ. ನೀವು ಶ್ರಮ ವಹಿಸಿ, ನಿಮ್ಮ ಬೆವರಿನ ಹನಿಗೆ ಬೆಲೆ ಸಿಗುವ ಕೆಲಸ ನಾವು ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ನಾಳೆ ಬೆಳಗಾವಿಯಲ್ಲಿ ಕಾಂಗ್ರೆಸ್ ನಾಯಕರಿಂದ ಬೃಹತ್ ಪ್ರತಿಭಟನಾ ರ್ಯಾಲಿ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರತಿಭಟನೆ ಮಾಡೋದು ಬಿಡೋದು ಅವರಿಗೆ ಬಿಟ್ಟಿದ್ದು ಎಂದರು.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಹೇಳಿಕೆಗೆ ಬೆಲೆ ಕೊಡುವ ಅಗತ್ಯವಿಲ್ಲ: ಸಿದ್ದರಾಮಯ್ಯ