ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನೇಮಕಗೊಂಡ ಮಹಾರಾಷ್ಟ್ರ ಮೂಲದ ಪೌರ ಕಾರ್ಮಿಕರನ್ನು ತಕ್ಷಣ ವಜಾಗೊಳಿಸಬೇಕೆಂದು ಒತ್ತಾಯಿಸಿ ಇಂದು ಕರ್ನಾಟಕ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಬೆಳಗಾವಿ ಪಾಲಿಕೆಯ ವ್ಯಾಪ್ತಿಯಲ್ಲಿ ಸಾಕಷ್ಟು ಪೌರ ಕಾರ್ಮಿಕರು ಇದ್ದಾರೆ. ಕೆಲ ಬಿಜೆಪಿ ಸದಸ್ಯರ ಕುಮ್ಮಕ್ಕಿನಿಂದ ಮಹಾರಾಷ್ಟ್ರ ಮೂಲದ ಪೌರಕಾರ್ಮಿಕರ ನೇಮಕ ಮಾಡಿಕೊಂಡಿರುವ ಕ್ರಮ ಸರಿಯಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
''ಪಾಲಿಕೆಯಲ್ಲಿ ಮಹಾರಾಷ್ಟ್ರದ ಕೋವಾಡದ ಪೌರ ಕಾರ್ಮಿಕರನ್ನು ನೇಮಕ ಮಾಡಲಾಗಿದೆ. ಅವರನ್ನು ಇಲ್ಲಿಗೆ ತಂದು ಸೇರಿಸಿದವರು ಯಾರು ಹಾಗೂ ಮಹಾರಾಷ್ಟ್ರ ಮೂಲದ ಪೌರ ಕಾರ್ಮಿಕರು ಎಷ್ಟು ಜನ ಇದ್ದಾರೋ ಅವರನ್ನು ಕೂಡಲೇ ವಜಾ ಮಾಡಿ ಸ್ಥಳೀಯರನ್ನು ನೇಮಕ ಮಾಡಿಕೊಳ್ಳಬೇಕು. ಪಾಲಿಕೆಯಲ್ಲಿ ಸದಸ್ಯರ ಸಂಬಂಧಿಕರೇ ಮೇಲ್ವಿಚಾರಕರಾಗಿದ್ದಾರೆ. ಅವರ ಅರ್ಹತೆ ಮತ್ತು ಯಾವ ಆಧಾರದ ಮೇಲೆ ಅವರನ್ನು ನೇಮಕ ಮಾಡಲಾಗಿದೆ. ಇದರ ಸಮಗ್ರ ತನಿಖೆ ನಡೆಸಿ ಪಾಲಿಕೆಯಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ'' ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಬಾಬ ಸಂಗೋಡಿ ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, "ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮಹಾರಾಷ್ಟ್ರ ಮೂಲದವರು ಗುತ್ತಿಗೆಯಾಧಾರದ ಮೇಲೆ ನೇಮಕವಾದ ಪೌರಕಾರ್ಮಿಕರ ಬಗ್ಗೆ ತನಿಖೆ ನಡೆಸಿ ಮೂರು ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದ್ದೇನೆ. ವರದಿ ಬಂದ ಬಳಿಕ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ" ಎಂದು ಭರವಸೆ ನೀಡಿದರು.
ಸಂತೋಷ ಗುಬಚಿ, ರವಿ ಸಾಖೆ, ಬಸವರಾಜ ದೊಡಮನಿ, ಸಾಗರ ಸಂಪಗಾರ, ರೋಹಿತ ಅನಗೋಳಕರ, ಓಂಕಾರ ಕರವಿನಕೊಪ್ಪ, ಕಮಲೇಶ ಚೌಧರಿ ಸೇರಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಅಂಗಡಿ ಮಾಲೀಕರಿಗೆ ಬುದ್ಧಿ ಕಲಿಸಿದ ಪೌರ ಕಾರ್ಮಿಕರು: ಇನ್ನೊಂದೆಡೆ, ರಸ್ತೆ ಬದಿ ಕಸ ಹಾಕದಂತೆ ಅನೇಕ ಬಾರಿ ಸೂಚನೆ ನೀಡಿದರೂ ಲೆಕ್ಕಿಸದವರಿಗೆ ಬುದ್ಧಿ ಕಲಿಸಲು ಮುಂದಾದ ಪೌರಕಾರ್ಮಿಕರು ಕಸವನ್ನು ಅಂಗಡಿ ಮುಂದೆ ಮತ್ತೆ ತಂದು (ಅಕ್ಟೋಬರ್ 21-2020) ಹಾಕಿದ್ದರು.
ನಗರದ 7ನೇ ವಾರ್ಡ್ನ ಬಸಟ್ಟಿಕೊಪ್ಪಲು ಮುಖ್ಯ ರಸ್ತೆಯ ಬದಿಯಲ್ಲೇ ಮೊಬೈಲ್ ಅಂಗಡಿಯವರು ಕಸವನ್ನು ಹಾಕುತ್ತಿದ್ದರು. ಈ ಬಗ್ಗೆ ನಗರಸಭೆ ಸಿಬ್ಬಂದಿ ಅನೇಕ ಬಾರಿ ಎಚ್ಚರಿಕೆ ನೀಡಲಾಗಿದ್ದರೂ ಮಾತಿಗೂ ಗಮನ ಕೊಡದೇ ಅದೇ ರೀತಿ ಕಸ ಸುರಿಯುತ್ತಿದ್ದರು. ಬುಧವಾರ ಕಸ ಎತ್ತುವ ಟ್ರ್ಯಾಕ್ಟರ್ ಬಂದಾಗ ಕಸ ರಸ್ತೆ ಬದಿಯಲ್ಲೇ ಇರುವುದನ್ನು ಕಂಡು ಕೋಪಗೊಂಡ ಪೌರ ಕಾರ್ಮಿಕರು ಅಂಗಡಿ ಮುಂದೆಯೇ ಕಸ ಸುರಿಯುವ ಮೂಲಕ ಬಿಸಿ ಮುಟ್ಟಿಸಿದ್ದರು.
ಮತ್ತೆ ಇದೇ ರೀತಿ ರಸ್ತೆ ಬದಿ ಕಸ ಹಾಕದಂತೆ ಎಚ್ಚರಿಕೆ ನೀಡಿದ್ದು, ಇಲ್ಲಿನ ಅಂಗಡಿ ಮಾಲೀಕರು ಹಾಗೂ ನಿವಾಸಿಗಳಿಗೂ ಎಚ್ಚರಿಕೆ ನೀಡಿದ್ದರು. ನಿತ್ಯ ವಾರ್ಡ್ಗೆ ಬರುವ ನಗರಸಭೆ ಕಸದ ವಾಹನಕ್ಕೆ ಕಸ ಹಾಕುವಂತೆ ಕಿವಿಮಾತು ಹೇಳಿದ್ದರು.
ಇದನ್ನೂ ಓದಿ: ರಸ್ತೆ ಬದಿ ಕಸ ಹಾಕಬೇಡಿ ಅಂದರೂ ಕೇಳಲಿಲ್ಲ: ಅಂಗಡಿ ಮಾಲೀಕರಿಗೆ ಬುದ್ಧಿ ಕಲಿಸಿದ ಪೌರ ಕಾರ್ಮಿಕರು