ಬೆಳಗಾವಿ: ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಸಂಬಂಧ ನವೆಂಬರ್ 23ರಂದು ಸುಪ್ರೀಂಕೋರ್ಟ್‌ನಲ್ಲಿ ಅಂತಿಮ ವಿಚಾರಣೆ ಹಿನ್ನೆಲೆಯಲ್ಲಿ ಇಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ಸಭೆ ನಡೆಯಿತು.
ಮುಂಬೈನ ಸಹ್ಯಾದ್ರಿ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗಡಿ ಭಾಗದ ಸಮಸ್ಯೆಗಳ ಪರಿಹಾರಕ್ಕಾಗಿ ಸಭೆಯಲ್ಲಿ ಇಬ್ಬರು ಸಚಿವರನ್ನು ನೇಮಿಸಿದೆ. ಮಹಾರಾಷ್ಟ್ರದ ಉನ್ನತ ಶಿಕ್ಷಣ ಸಚಿವ ಚಂದ್ರಕಾಂತ ಪಾಟೀಲ್, ಅಬಕಾರಿ ಸಚಿವ ಶಂಭುರಾಜೇ ದೇಸಾಯಿ ನೇಮಕಗೊಂಡಿದ್ದಾರೆ. ಗಡಿ ಉಸ್ತುವಾರಿ ಸಚಿವರನ್ನು ನೇಮಿಸುವ ಮೂಲಕ ಮಹಾರಾಷ್ಟ್ರ ಮತ್ತೊಮ್ಮೆ ಗಡಿ ಬಗ್ಗೆ ತನಗಿರುವ ಮುತುವರ್ಜಿ ತೋರ್ಪಡಿಸಿದೆ. ಇತ್ತ ಕರ್ನಾಟಕ ಸರ್ಕಾರದ ನಿರಾಸಕ್ತಿ ಮುಂದುವರೆದಿದ್ದು, ಗಡಿ ಭಾಗದ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಸುಪ್ರೀಂಕೋರ್ಟ್‌ನಲ್ಲಿ ಪ್ರಬಲವಾದ ಮಂಡನೆಗೆ ಸರ್ವಪಕ್ಷಗಳ ನಾಯಕರು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೇ ಪ್ರಧಾನಿ ಭೇಟಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಒತ್ತಾಯಿಸಲಾಯಿತು. ನವೆಂಬರ್ 23ರ ಸುಪ್ರೀಂಕೋರ್ಟ್ ವಿಚಾರಣೆ ಬಳಿಕ ಈ ಬಗ್ಗೆ ನಿರ್ಧಾರ ಪ್ರಕಟ ಸಾಧ್ಯತೆ ಇದೆ.
ಗಡಿವಿವಾದ ಕುರಿತು ನವೆಂಬರ್ 23 ರಂದು ಸುಪ್ರೀಂಕೋರ್ಟ್‌ನಲ್ಲಿ ಅಂತಿಮ ವಿಚಾರಣೆ ನಡೆಯಲಿದೆ. ಗಡಿವಿವಾದ ಪ್ರಕರಣ ಕೈಗೆತ್ತಿಕೊಳ್ಳಬೇಕೋ, ಬೇಡವೋ ಎಂಬ ಬಗ್ಗೆ ವಿಚಾರಣೆ ನಡೆಯಲಿದೆ. ಮಹಾಜನ್ ಆಯೋಗದ ವರದಿ ತಿರಸ್ಕರಿಸಿ ಮಹಾರಾಷ್ಟ್ರ ಸರ್ಕಾರ 2004ರಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. 18 ವರ್ಷಗಳ ಬಳಿಕ ನವೆಂಬರ್ 23 ರಂದು ಪ್ರಕರಣದ ವಿಚಾರಣೆಗೆ ದಿನಾಂಕ ನಿಗದಿಯಾಗಿದೆ. ಗಡಿವಿವಾದ ಸುಪ್ರೀಂಕೋರ್ಟ್ ವ್ಯಾಪ್ತಿಗೆ ಬರಲ್ಲ ಎಂಬುದು ಕರ್ನಾಟಕ ಸರ್ಕಾರದ ವಾದವಾಗಿದೆ.
ಓದಿ: ಸಂಘಟನೆಗಳ ಮನವಿಗೆ ಪೊಲೀಸ್ ಕಮಿಷನರ್ ಸ್ಪಂದನೆ: ಬೆಳಗಾವಿಯಲ್ಲಿ ತೆರೆಕಾಣದ ಮರಾಠಿ ಸಿನಿಮಾ ಬಾಯ್ಸ್ 3