ಚಿಕ್ಕೋಡಿ (ಬೆಳಗಾವಿ): ಕರ್ನಾಟಕದ ಗಡಿ ಭಾಗದಲ್ಲಿರುವ ಮಹಾರಾಷ್ಟ್ರದ ಸಾಂಗಲಿ, ಮಿರಜ್, ಕೊಲ್ಲಾಪೂರ, ಇಚಲಕರಂಜಿಗಳಂತ ದೊಡ್ಡ ನಗರಗಳ ಆಸ್ಪತ್ರೆಗಳ ಮೇಲೆ ಕರ್ನಾಟಕ ಬೆಳಗಾವಿ, ವಿಜಯಪುರ, ಬಾಗಲಕೋಟೆ ಈ ಮೂರು ಜಿಲ್ಲೆಯ ಜನರು ಅತಿ ಹೆಚ್ಚಾಗಿ ಮಹಾರಾಷ್ಟ್ರದ ಆಸ್ಪತ್ರೆಗಳ ಮೇಲೆ ಅವಲಂಬಿತರಾಗಿದ್ದಾರೆ.
ಬೆಳಗಾವಿ ಜಿಲ್ಲಾಸ್ಪತ್ರೆ ಇಲ್ಲವೇ ಖಾಸಗಿ ಆಸ್ಪತ್ರೆಗೆ ತೆರಳಬೇಕಾದರೆ ಸುಮಾರು ನೂರು ಕಿ.ಮೀ ಕ್ರಮಿಸಬೇಕು ಎಂಬ ಕಾರಣಕ್ಕೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ, ರಾಯಬಾಗ, ಅಥಣಿ, ಕಾಗವಾಡ ತಾಲೂಕಿನ ಶೇ 70ರಷ್ಟು ಪ್ರತಿಶತ ಜನರು ಮಹಾರಾಷ್ಟ್ರ ಆಸ್ಪತ್ರೆಗಳ ಮೇಲೆ ಅವಲಂಬಿತರಾಗಿದ್ದಾರೆ.
ಚಿಕ್ಕೋಡಿ ಉಪವಿಭಾಗದ ಜನರು ಮಹಾರಾಷ್ಟ್ರದ ಆಸ್ಪತ್ರೆಗಳಿಗೆ ಅವಲಂಬಿತವಾಗಿದ್ದು, ಅಲ್ಲಿನ ಆಸ್ಪತ್ರೆಗಳು ಕಡಿಮೆ ಖರ್ಚಿನಲ್ಲಿ ಒಳ್ಳೆಯ ಸೌಲಭ್ಯಗಳನ್ನು ಒದಗಿಸಿ ಚಿಕಿತ್ಸೆ ನೀಡುತ್ತಿವೆ.
ಆದರೆ, ಈ ಕೊರೊನಾ ಬಂದಾಗಿನಿಂದ ಸರ್ಕಾರ ಅಂತರ್ ರಾಜ್ಯ ಸಂಪರ್ಕ ಕಡಿತ ಮಾಡಿದ್ದರಿಂದ ಈ ಭಾಗದ ಜನರು ಕಷ್ಟ ಪಟ್ಟಿದ್ದು ಅಷ್ಟಿಷ್ಟಲ್ಲ. ಆದರೆ, ಈಗ ಅಂತರ್ ರಾಜ್ಯ ಅವಕಾಶ ಕಲ್ಪಿಸಿದರೂ ಜನರು ಮಾತ್ರ ಮತ್ತೆ ಸಂಕಷ್ಟ ಅನುಭವಿಸುವ ಪ್ರಸಂಗ ಎದುರಾಗಿದೆ.
ಮುಗಂಡ ಹಣದ ಪಾಲಿಸಿಯಿಂದಾಗಿ ಸಾಮಾನ್ಯ ಚಿಕಿತ್ಸೆ ಪಡೆಯುವುದಕ್ಕೆ ರೋಗಿಗಳು ಪರದಾಡುವಂತಾಗಿದೆ. ಕೊರೊನಾ ಹೊರತಾದ ಸಾಮಾನ್ಯ ಕಾಯಿಲೆಗಳ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದರೆ ಕನಿಷ್ಠ ಒಂದರಿಂದ ಎರಡು ಲಕ್ಷ ಹಣ ಮುಂಗಡವಾಗಿ ಕಟ್ಟಬೇಕಾಗಿದೆ.
ಮಹಾರಾಷ್ಟ್ರದ ಆಸ್ಪತ್ರೆಗಳು ಮೊದಲು ಸಾಮಾನ್ಯದಿಂದ ಹಿಡಿದು ಡಯಾಲಿಸಿಸ್ ರೋಗಗಳವರೆಗೂ ಯಾವುದೇ ಮುಂಗಡ ಹಣ ಪಡೆದುಕೊಳ್ಳುತ್ತಿರಲಿಲ್ಲ. ಆದರೆ, ಈಗ ಕಡ್ಡಾಯವಾಗಿ ಮುಂಗಡ ಹಣ ಪಾವತಿ ಮಾಡಿದರೆ ಮಾತ್ರ ಚಿಕಿತ್ಸೆ ಎನ್ನುತ್ತಿವೆ ಮಹಾರಾಷ್ಟ್ರದ ಆಸ್ಪತ್ರೆಗಳು. ಇದರಿಂದ ಗಡಿ ಭಾಗದ ಜನರು ಚಿಕಿತ್ಸೆ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಸಾಮಾನ್ಯ ಚಿಕಿತ್ಸೆಗೆ ಹೋದರೂ, ಮೊದಲು ಕೋವಿಡ್ ಪರೀಕ್ಷೆ ಕಡ್ಡಾಯ. ಬಳಿಕವೇ ಆಸ್ಪತ್ರೆಗೆ ದಾಖಲು. ಹೀಗಾಗಿ ಬಡ ರೋಗಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಸ್ಥಳೀಯ ತಾಲೂಕು ಆಸ್ಪತ್ರೆಗಳು ಈಗ ಕೋವಿಡ್ ಆಸ್ಪತೆಯಾಗಿ ಮಾರ್ಪಟ್ಟಿವೆ. ಜಿಲ್ಲಾ ಆಸ್ಪತ್ರೆ ಹಾಗೂ ಕೆಎಲ್‌ಇ ಆಸ್ಪತ್ರೆ ಕೂಡಾ ಕೋವಿಡ್ ಸೆಂಟರ್ ಆದ ಪರಿಣಾಮ ಚಿಕ್ಕೋಡಿ ಉಪವಿಭಾಗದ ತಾಲೂಕಿನ ಜನರು ಮಹಾರಾಷ್ಟ್ರದ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಆದರೆ, ಮಹಾರಾಷ್ಟ್ರದ ಆಸ್ಪತ್ರೆಗಳು ಮುಗಂಡವಾಗಿ ಒಂದು ಲಕ್ಷದಿಂದ ಎರಡು ಲಕ್ಷದವರೆಗೆ ಹಣ ಕೇಳುತ್ತಿರುವುದರಿಂದ ಬಡ ಜನರು ಕಂಗಾಲಾಗಿದ್ದಾರೆ. ಕೆಲ ಆಸ್ಪತ್ರೆಗಳು ಕೊರೊನಾ ಹೆಸರಿನಲ್ಲಿ ಹಣ ಮಾಡಲು ಮುಂದಾದರೆ, ಕೆಲ ಬಡ ಹಾಗೂ ಮಧ್ಯಮ ವರ್ಗದ ಜನರು ಆಸ್ಪತ್ರೆಗಳಿಗೆ ಹಣ ಹೊಂದಿಸಲು ಪರದಾಡುತ್ತಿದ್ದಾರೆ.