ಬೆಳಗಾವಿ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಪುಂಡರು ಕನ್ನಡಧ್ವಜ ಸುಟ್ಟಿರುವ ಘಟನೆಗೆ ಬೇಸರ ವ್ಯಕ್ತಪಡಿಸಿದ ಕಲಾಪ, ಈ ಸಂಬಂಧ ಖಂಡನಾ ನಿರ್ಣಯ ಕೈಗೊಂಡಿತು. ಸರ್ಕಾರದ ನಿರ್ಧಾರಕ್ಕೆ ಸರ್ವ ಸದಸ್ಯರು ಸಹಮತ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ಮಹಾರಾಷ್ಟ್ರ ನೆಲದಲ್ಲಿ ಧ್ವಜ ಸುಟ್ಟಿರುವುದು ಪ್ರತಿಯೊಬ್ಬ ಕನ್ನಡಿಗರಿಗೆ ನೋವು ತಂದಿದೆ. ರಾಜ್ಯದಲ್ಲಿ ಯಾವುದೇ ಸರ್ಕಾರ ಇರಲಿ. ನೆಲ, ಜಲ ಭಾಷೆ ಕಾಪಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಮಹಾರಾಷ್ಟ್ರದ ಶಿವಸೇನೆ ಹಾಗೂ ಇಲ್ಲಿನ ಎಂಇಎಸ್ ಕಾರ್ಯಕರ್ತರು ನಿರಂತರ ಪುಂಡಾಟಿಕೆ ಪ್ರದರ್ಶನ ಮಾಡುತ್ತಿದ್ದಾರೆ.
ಭಾಷಾ ಸೌಹಾರ್ದತೆಗೆ ಧಕ್ಕೆ ತರುವ ಕೆಲಸ ಗಡಿಭಾಗಗಳಲ್ಲಿ ನಿಲ್ಲಬೇಕು. ಹೀಗಾಗಿ ಧ್ವಜ ಸುಟ್ಟಿರುವ ಕಿಡಿಗೇಡಿಗಳ ವಿರುದ್ಧ ಉಗ್ರ ಶಿಕ್ಷೆ ಆಗಬೇಕು. ಈ ಸಂಬಂಧ ಖಂಡನಾ ನಿರ್ಣಯ ಕೈಗೊಂಡು ಮಹಾರಾಷ್ಟ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕೆಂದು ಅಲ್ಲಿನ ಸರ್ಕಾರಕ್ಕೆ ತಿಳಿಸಲಾಗುವುದು ಎಂದರು.
ಇದಕ್ಕೂ ಮುನ್ನ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಶಿವಸೇನೆ ಹಾಗೂ ಎಂಇಎಸ್ ಪುಂಡರು ಪದೇ ಪದೆ ಪುಂಡಾಟಿಕೆ ಪ್ರದರ್ಶನ ಮಾಡುತ್ತಿದ್ದಾರೆ. ಈ ಬೆಳವಣಿಗೆಯಿಂದ ಉಭಯ ರಾಜ್ಯಗಳಲ್ಲಿ ಶಾಂತಿಭಂಗ ಉಂಟಾಗುತ್ತಿದೆ. ಕನ್ನಡ ಧ್ವಜ ಸುಟ್ಟಿರುವ ಪ್ರಕರಣ ಗಂಭೀರವಾಗಿದ್ದು, ಈ ಬಗ್ಗೆ ಕರ್ನಾಟಕ ಸರ್ಕಾರ ಖಂಡನಾ ನಿರ್ಣಯ ಕೈಗೊಳ್ಳಬೇಕು. ಈ ನಿರ್ಣಯವನ್ನು ಮಹಾರಾಷ್ಟ್ರ ಹಾಗೂ ಕೇಂದ್ರ ಸರ್ಕಾರಕ್ಕೆ ಕಳಿಸೋಣ. ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ಕೊಡಿಸಲು ಆಗ್ರಹಿಸೋಣ ಎಂದರು.
ಬಳಿಕ ಮಳವಲ್ಲಿ ಶಾಸಕ ಕೆ. ಅನ್ನದಾನಿ ಮಾತನಾಡಿ, ಶಾಸ್ತ್ರೀಯ ಸ್ಥಾನ ಹೊಂದಿರುವ ರಾಜ್ಯ ನಮ್ಮದು. ಧ್ವಜ ಸುಟ್ಟಿರುವ ಶಿವಸೇನೆ-ಎಂಇಎಸ್ ಪುಂಡರ ವಿರುದ್ಧ ಉಗ್ರ ಶಿಕ್ಷೆ ಆಗಬೇಕು. ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆ ಸಹಿಸಲು ಸಾಧ್ಯವಿಲ್ಲ. ಎಂಇಎಸ್ ನಿಯಂತ್ರಣಕ್ಕೆ ಸರ್ಕಾರ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ನಮ್ಮದು ಭ್ರಷ್ಟಾಚಾರ ರಹಿತ ಸರ್ಕಾರ : 'ಕೈ' ಪರ್ಸಂಟೇಜ್ ಆರೋಪಕ್ಕೆ ಸಚಿವ ಅಶೋಕ್ ತಿರುಗೇಟು