ಬೆಳಗಾವಿ: ಕಿತ್ತೂರು ಉತ್ಸವದ ಆಮಂತ್ರಣ ಪತ್ರಿಕೆ ಮೂರು ಬಾರಿ ಮುದ್ರಣ ಮಾಡಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಕಿತ್ತೂರು ಸಂಸ್ಥಾನ ಪ್ರಾರಂಭವಾದಾಗಿಂದ ಕಿತ್ತೂರು ಕಲ್ಮಠದ ಸಾನಿಧ್ಯವಿದೆ. ಅದು ನಿರಂತರವಾಗಿ ನಡೆದುಕೊಂಡು ಬರ್ತಿದೆ. ಆ ಪರಂಪರೆಯನ್ನು ಸರ್ಕಾರ ಮುಂದುವರೆಸಿಕೊಂಡು ಹೋಗಬೇಕು ಎಂದು ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಿತ್ತೂರು ಉತ್ಸವದ ಆಮಂತ್ರಣ ಪತ್ರಿಕೆ ಮೂರು ಬಾರಿ ಮುದ್ರಣ ಒಳ್ಳೆಯ ಬೆಳವಣಿಗೆ ಅಲ್ಲ. ಕಿತ್ತೂರು ಅರಮನೆ ಹಾಗೂ ಗುರುಮನೆ ಮಧ್ಯೆ ವಿಶೇಷ ಸಂಬಂಧ ಇದೆ. ಈ ಸಂಬಂಧ ನಿರಂತರವಾಗಿ ಇರಬೇಕೆಂಬುದು ನಮ್ಮ ಅಪೇಕ್ಷೆಯಾಗಿದೆ. ಕಿತ್ತೂರು ಸಂಸ್ಥಾನದ ರಾಜರು, ಚೆನಮ್ಮ ಜೀ ಕಾಲದವರೆಗೆ ಗುರುಗಳ ಆದೇಶ ಪಾಲನೆ ಮಾಡ್ತಿದ್ರು. ಇಂದೂ ಸಹ ಈ ಪರಂಪರೆ ಮುಂದುವರಿಬೇಕು. ಈ ವರ್ಷ ಸರ್ವ ಜನಾಂಗದ ಸ್ವಾಮೀಜಿಗಳನ್ನು ಆಹ್ವಾನಿಸಿ ಶೋಭೆ ತರಬೇಕು ಎಂದರು.
ರಾಷ್ಟ್ರದ ನಾಯಕರು ಯಾವುದೇ ಜಾತಿಗೆ ಸೀಮಿತ ಆಗಬಾರದು. ಸ್ವಾಮೀಜಿಗಳನ್ನು ಕರೆಯುವುದಾದರೆ ಸರ್ವ ಜನಾಂಗದ ಸ್ವಾಮೀಜಿಗಳನ್ನು ಕರೆದರೆ ಒಳ್ಳೆಯದು. ಕಿತ್ತೂರು ಸಂಸ್ಥಾನ ಪ್ರಾರಂಭವಾದಾಗಿನಿಂದ ಕಿತ್ತೂರು ಕಲ್ಮಠದ ಸಾನ್ನಿಧ್ಯವಿದ್ದು ನಿರಂತರವಾಗಿ ನಡೆದುಕೊಂಡು ಬರ್ತಿದೆ. ಆ ಪರಂಪರೆಯನ್ನು ಸರ್ಕಾರ ಮುಂದುವರೆಸಿಕೊಂಡು ಹೋಗುವ ವಿಶ್ವಾಸವಿದೆ ಎಂದರು.
ಕಿತ್ತೂರು ಕಲ್ಮಠ ಶ್ರೀಗಳ ಜೊತೆ ಮಾತನಾಡಿಯೇ ಆಮಂತ್ರಣ ಪತ್ರಿಕೆ ಮುದ್ರಣ:
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಬಿಎಸ್‌ವೈ 50 ಕೋಟಿ ಅನುದಾನ ನೀಡಿದ್ದು, ಈಗಾಗಲೇ 10 ಕೋಟಿ ರೂ.ಗಳ ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ಪಡೆದುಕೊಳ್ಳಲಾಗಿದೆ. ಶೀಘ್ರವೇ ಚೆನ್ನಮ್ಮ ಕೋಟೆ ಅರಮನೆ ಮರು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.
ಕಿತ್ತೂರು ಉತ್ಸವ ಬೆಳ್ಳಿಹಬ್ಬದ ಆಮಂತ್ರಣ ಪತ್ರಿಕೆ ವಿಚಾರದಲ್ಲಿ ಕಲ್ಮಠದ ಶ್ರೀಗಳ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲಾ ಸಮುದಾಯದ ಶ್ರೀಗಳ ಆಹ್ವಾನಿಸಲು ಸಿಎಂ ಕಚೇರಿಯಿಂದ ಡಿಸಿಗೆ ಸೂಚನೆ ಕೊಟ್ಟಿದ್ದರು. ಹೀಗಾಗಿ ಕಲ್ಮಠ ಶ್ರೀಗಳ ಜೊತೆಗೆ ನಾನೇ ಖುದ್ದಾಗಿ ಮಾತನಾಡಿ ಸಿಎಂ ಕಚೇರಿಯ ಸಂದೇಶ ತಿಳಿಸಿದ್ದೇನೆ. ಶ್ರೀಗಳ ಜೊತೆ ಮಾತನಾಡಿಯೇ ಆಮಂತ್ರಣ ಪತ್ರಿಕೆ ಮುದ್ರಣ ಮಾಡಲಾಗಿದೆ ಎಂದರು.
ವಾಲ್ಮೀಕಿ ಸಮುದಾಯ, ಪಂಚಮಸಾಲಿ ಸಮುದಾಯ, ಹುಕ್ಕೇರಿ ಶ್ರೀ ಸೇರಿ ಎಲ್ಲಾ ಸಮುದಾಯದ ಸ್ವಾಮೀಜಿಗಳಿಗೆ ಆಹ್ವಾನ ನೀಡಲಾಗಿದೆ. ಸಿಂದಗಿ ಉಪಚುನಾವಣೆ ಪ್ರಚಾರ ಇರೋದ್ರಿಂದ ಸಾಯಂಕಾಲ ಬರೋದಾಗಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಕಲ್ಮಠ ಶ್ರೀಗಳ ಅಪ್ಪಣೆ ಮೇರೆಗೆ ಆಮಂತ್ರಣ ಪತ್ರಿಕೆ ಮರಳಿ ಮುದ್ರಿಸಲಾಗಿದೆ ಎಂದರು.
ಮುಂಬೈ ಕರ್ನಾಟಕ ಕಿತ್ತೂರು ಕರ್ನಾಟಕ ಮರುನಾಮಕರಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಿತ್ತೂರು ಕರ್ನಾಟಕ ವಿಚಾರವನ್ನು ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯಾಗಿ ಮನವಿ ಸಲ್ಲಿಸಲಾಗುತ್ತದೆ. ಮುಂದಿನ ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವಂತೆ ಮನವಿ ಮಾಡಲಾಗುತ್ತದೆ. ಇದಲ್ಲದೇ ಕಿತ್ತೂರು ಕರ್ನಾಟಕಕ್ಕೆ ವಿಶೇಷ ನಿಗಮ ಮಾಡಲು ಮನವಿ ಮಾಡಿದ್ದೇವೆ. ಸಿಎಂ ಕಿತ್ತೂರು ಉತ್ಸವಕ್ಕೆ ಚಾಲನೆ ಕೊಟ್ಟು ಸಿಹಿಸುದ್ದಿ ನೀಡುವ ವಿಶ್ವಾಸವಿದೆ ಎಂದರು.
ಇದನ್ನೂ ಓದಿ: ಕಿತ್ತೂರು ಉತ್ಸವ-2021ಕ್ಕೆ ಅದ್ಧೂರಿ ಚಾಲನೆ.. ಚೆನ್ನಮ್ಮನ ವೀರಾವೇಷ ಮೆಲುಕು