ಬೆಳಗಾವಿ: ನಮ್ಮ ಪುಣ್ಯಕ್ಕೆ ಬೊಮ್ಮಾಯಿ ಸರ್ಕಾರ ಮತಾಂತರ ನಿಷೇಧ ಕಾನೂನು ಜಾರಿಗೆ ತಂದಿದೆ. ಇಲ್ಲವಾದರೆ ಮಠಗಳ ಮುಂಭಾಗದಲ್ಲಿ ಚರ್ಚ್, ಮಸೀದಿ ನಿರ್ಮಾಣ ಆಗುತ್ತಿದ್ದವು. ನಾವು ಬೇರೆಯವರನ್ನು ದೂಷಿಸಲ್ಲ. ನಾವೇ ಎಡವಿದ್ದೇವೆ. ಬಿಟ್ಟು ಹೋದವರನ್ನು ವಾಪಸ್ ಕರೆದುಕೊಂಡು ಬಂದು ಅಣ್ಣ ತಮ್ಮಂದಿರಂತೆ ಇರೋಣ ಎಂದು ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಕೊಲ್ಲಾಪುರದ ಕನ್ನೇರಿ ಮಠದಲ್ಲಿ ನಡೆಯುತ್ತಿರುವ ಸಂತ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಇದು ಸ್ವಾಮೀಜಿಗಳು ಹಾಗೂ ಭಕ್ತರ ಸಮಾವೇಶ. ಸುಮಾರು 400 - 500 ಮಠಾಧೀಶರು ಭಾಗಿಯಾಗಿದ್ದಾರೆ. ಮತ್ತಷ್ಟು ಮಠಾಧೀಶರು ಬರುತ್ತಿದ್ದಾರೆ. ಭಕ್ತರ ದೇಣಿಗೆ, ಕಾಣಿಕೆಯಿಂದ ಮಠಗಳು ನಿರ್ಮಾಣವಾಗಿವೆ. ನಾವು ಮಠಗಳ ಮಾಲೀಕರಲ್ಲ, ವ್ಯವಸ್ಥಾಪಕರು. ಸಂಸ್ಕಾರ ಕೊಡುವ ಕೆಲಸ ಸ್ವಾಮೀಜಿಗಳು ಮಾಡಬೇಕು. ಗುರುಗಳು ಮತ್ತು ಭಕ್ತರ ಅಂತರ ಕಡಿಮೆ ಆಗಬೇಕು. ಗುರುಗಳು ಭಕ್ತರ ಸಮೀಪ ಹೋಗಬೇಕು ಎಂದು ಸಲಹೆ ನೀಡಿದರು.
ಭಕ್ತರಿಗಾಗಿ ಕೆಲಸ ಮಾಡಬೇಕು: ದೇಶದಲ್ಲಿ 50 ಲಕ್ಷ ದೇವಸ್ಥಾನ, 10 ಲಕ್ಷ ಮಠ ಹಾಗೂ ಆಶ್ರಮಗಳಿವೆ. ಒಂದೊಂದು ಮಠದಿಂದ ಒಂದೊಂದು ಗ್ರಾಮ ದತ್ತು ತೆಗೆದುಕೊಂಡರೆ ದೇಶ ಸುಧಾರಣೆ ತುಂಬಾ ಸುಲಭವಾಗುತ್ತದೆ. ರೈತರು ಮಠಗಳನ್ನು ಕಟ್ಟುತ್ತಾರೆ. ಮಠಗಳು ಭಕ್ತರಿಗಾಗಿ ಕೆಲಸ ಮಾಡಬೇಕು. ಭಕ್ತರ ಹಿತಕ್ಕಾಗಿ ಏನೇನು ಚಟುವಟಿಕೆ ಮಾಡಬೇಕು ಎಂದು ಆಗಾಗ ಕಾರ್ಯಕ್ರಮ ಮಾಡುತ್ತೇವೆ.
ಮಠದಲ್ಲಿ ಯಾತ್ರೆಗಳು ಆಗುವಾಗ ಎತ್ತುಗಳ, ಹಸುಗಳ ಪ್ರದರ್ಶನ ಆಗಬೇಕು. ರೈತರಿಗೆ ಒಳ್ಳೆಯ ಸಸಿಗಳು, ದೇಸಿಯ ಬೀಜಗಳು ಮಠದಿಂದ ನೀಡಿದರೆ ಒಳ್ಳೆಯ ರೀತಿ ಬೆಳೆಯುತ್ತಾರೆ. ಭಕ್ತರಿಗೆ ಒಳ್ಳೆಯ ಆಹಾರ ಸಿಗಬೇಕು. ನಮ್ಮ ಮಠಗಳು ಇಂತಹ ಪೂರೈಕೆ ಕೇಂದ್ರಗಳಾಗಬೇಕು ಎಂದರು.
ನಾವು ಸ್ವಾಮೀಜಿಗಳಾದ ಮೇಲೆ ಪೂರ್ವಾಶ್ರಮ ತೊರೆದು ಭಕ್ತರ ಹತ್ತಿರ ಹೋಗಬೇಕು. ಯಾವುದೇ ಜಾತಿ, ಮತ ಪಂಥಗಳಿಂದ ಸ್ವಾಮೀಜಿಗಳಾಗಬಾರದು. ತಮ್ಮ ವಿದ್ವತ್, ಯೋಗ್ಯತೆ ಮೇಲೆ ಸ್ವಾಮೀಜಿಗಳಾಗಬೇಕು. ನಮ್ಮ ಸ್ವಾಮೀಜಿಗಳು ಮತಾಂತರ ತಡೆಯಬೇಕು. ಇಲ್ಲವಾದರೆ ಮತಾಂತರ ಆಗಲ್ಲ ದೇಶಾಂತರ ಶುರುವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆಗೆ ರಾಜ್ಯಪಾಲರ ಅಂಕಿತ: ಕಾಯ್ದೆ ಉಲ್ಲಂಘಿಸಿದ್ರೆ ಯಾವ ಶಿಕ್ಷೆ?