ಬೆಳಗಾವಿ/ಹುಬ್ಬಳ್ಳಿ: ಜೆಡಿಎಸ್ ತೊರೆಯುವ ಮುಖಂಡರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೀಗ ಅವರ ಪಟ್ಟಿಗೆ ಜೆಡಿಎಸ್ ಮುಖಂಡ, ಮಾಜಿ ಶಾಸಕ ಎನ್.ಹೆಚ್ ಕೋನರೆಡ್ಡಿ ಸೇರ್ಪಡೆಯಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ ಸೋಲನ್ನ ನೆಪವಾಗಿಟ್ಟುಕೊಂಡು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ ಕೋನರೆಡ್ಡಿ, ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಪರ ಕಾರ್ಯ ನಿರ್ವಹಿಸಿದ್ದರು.
ನವಲಗುಂದ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಇವರು ಮಹಾದಾಯಿ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಕಳೆದ 30 ವರ್ಷಗಳಿಂದ ಜೆಡಿಎಸ್ನಲ್ಲಿದ್ದ ಕೋನರೆಡ್ಡಿ, ಸದ್ಯ ಜೆಡಿಎಸ್ ತೊರೆದು ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ.
ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸೇರಲು ನಿರ್ಧರಿಸಿರುವ ಅವರು, ಇಂದು ಸುವರ್ಣ ಸೌಧದಲ್ಲಿ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಂದು ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ಹಿನ್ನೆಲೆ ಬೆಳಗಾವಿಗೆ ಆಗಮಿಸುತ್ತಿಲ್ಲ. ಈ ಹಿನ್ನೆಲೆ ಇಂದು ಸಿದ್ದರಾಮಯ್ಯ ಜತೆ ಸಮಾಲೋಚಿಸಿ ನಾಳೆ(ಮಂಗಳವಾರ) ಇಲ್ಲ ಒಂದೆರಡು ದಿನಗಳಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ.
2013ರಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ನವಲಗುಂದ ಶಾಸಕರಾಗಿ ಆಯ್ಕೆಯಾಗಿದ್ದ ಕೋನರೆಡ್ಡಿ 2018ರಲ್ಲಿ ಬಿಜೆಪಿಯ ಶಂಕರ್ ಪಾಟೀಲ್ ಮುನೇನಕೊಪ್ಪ ವಿರುದ್ಧ ಸೋಲನುಭವಿಸಿದ್ದರು. 2018ರಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಜೆಡಿಎಸ್ ಸರ್ಕಾರ ರಚಿಸಿದ ಸಂದರ್ಭ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡರು.
2019ರ ನಂತರ ಇವರು ಜೆಡಿಎಸ್ನಲ್ಲಿ ಅಷ್ಟು ಸಕ್ರಿಯವಾಗಿ ಕಾಣಿಸಿಕೊಂಡಿರಲಿಲ್ಲ. ಹಲವು ಶಾಸಕರು ಹಾಗು ಜೆಡಿಎಸ್ ಮುಖಂಡರು ಕಾಂಗ್ರೆಸ್ ನತ್ತ ಮುಖ ಮಾಡಿರುವ ಸಂದರ್ಭ ಮುಂದಿನ ಚುನಾವಣೆಯಲ್ಲಿ ಗೆಲುವು ಅನಿವಾರ್ಯವಾಗಿರುವ ಹಿನ್ನೆಲೆ ಕೋನರೆಡ್ಡಿ ಸಹ ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ ಎನ್ನಲಾಗ್ತಿದೆ.
ಜೈ ಎಂದ ಕಾರ್ಯಕರ್ತರು:
ಜೆಡಿಎಸ್ ಮುಖಂಡ, ಮಾಜಿ ಶಾಸಕ ಎನ್.ಹೆಚ್ ಕೋನರಡ್ಡಿ, ಕಾಂಗ್ರೆಸ್ ಸೇರ್ಪಡೆಯಾಗುವ ವಿಚಾರ ಖಚಿತವಾದ ಹಿನ್ನೆಲೆ ನವಲಗುಂದದಲ್ಲಿ ನಡೆದ ಸಭೆವೊಂದರಲ್ಲಿ ಅವರ ಕಾರ್ಯಕರ್ತರು ಸಹ ಜೈ ಎಂದಿದ್ದಾರೆ. ನವಲಗುಂದದಲ್ಲಿ ಕೋನರಡ್ಡಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧಿಕೃತವಾಗಿ ಡಿ.14 ರಂದು ಬೆಳಗಾವಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರುವುದಾಗಿ ತಿಳಿಸಿದರು. ಈ ನಿರ್ಣಯಕ್ಕೆ ಕೋನರಡ್ಡಿ ಅವರ ಕಾರ್ಯಕರ್ತರು ಸಹ ಕೈ ಜೋಡಿಸಿದ್ದು, ಈಗ ಜೆಡಿಎಸ್ ಪಕ್ಷಕ್ಕೆ ಹಿನ್ನಡೆಯಾದಂತಾಗಿದೆ.
ಇದನ್ನೂ ಓದಿ: ಸುವರ್ಣಸೌಧದವರೆಗೆ ಪಾದಯಾತ್ರೆ.. ಭಜನಾ ತಂಡದ ಜತೆ ನೃತ್ಯ ಮಾಡಿದ ಶಾಸಕಿ ನಿಂಬಾಳ್ಕರ್