ಚಿಕ್ಕೋಡಿ (ಬೆಳಗಾವಿ): 'ಅಕ್ಟೋಬರ್ 1ರೊಳಗೆ ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ ಮೀಸಲಾತಿ ಘೋಷಿಸಿದರೆ ಮುಖ್ಯಮಂತ್ರಿಗಳಿಗೆ ಕಲ್ಲುಸಕ್ಕರೆ ತುಲಾಭಾರ ಮಾಡುತ್ತೇವೆ. ಮೀಸಲಾತಿ ವಿಳಂಬವಾದರೆ ಸತ್ಯಾಗ್ರಹ ಮುಂದುವರೆಸುತ್ತೇವೆ' ಎಂದು ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, 'ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ನೀಡುವ ಬಗ್ಗೆ ಸರ್ಕಾರಕ್ಕೆ ನೀಡಲಾದ ಗಡುವು ಸೆ.15ಕ್ಕೆ ಮುಗಿದಿದೆ. ಆದರೆ, ಸೆ. 15ರೊಳಗೆ ಮೀಸಲಾತಿ ಘೋಷಣೆ ಮಾಡುತ್ತೇವೆ ಎಂದು ಸರ್ಕಾರ ಹೇಳಿತ್ತು. ಇಲ್ಲಿಯವರೆಗೂ ಸರ್ಕಾರ ಯಾವುದೇ ಸ್ಪಷ್ಟೀಕರಣ ನೀಡಿಲ್ಲ' ಎಂದರು.
'ನಾಳೆಯಿಂದ ಆರಂಭವಾಗುವ ಪಂಚಮಸಾಲಿ ಪ್ರತಿಜ್ಞಾಪಂಚ ಅಭಿಯಾನ ಅಕ್ಟೋಬರ್ 1ಕ್ಕೆ ಬೆಂಗಳೂರಿಗೆ ತಲುಪುತ್ತದೆ. ಅಷ್ಟರೊಳಗೆ ಮೀಸಲಾತಿ ಘೋಷಣೆ ಮಾಡಿದರೆ ಮುಖ್ಯಮಂತ್ರಿಗಳಿಗೆ ಕಲ್ಲುಸಕ್ಕರೆ ತುಲಾಭಾರ ಮಾಡುತ್ತೇವೆ' ಎಂದರು.
'ಪಂಚಮಸಾಲಿ ಸಮುದಾಯದ ಸ್ಥಿತಿಗತಿಗಳ ಬಗ್ಗೆ ಸಿಎಂ ಬೊಮ್ಮಾಯಿಯವರಿಗೆ ಗೊತ್ತಿದೆ. ಕೇಳಿದಾಗಲೆಲ್ಲಾ ಓಟು ಹಾಕುತ್ತಾರೆ ಎಂದು ನಮ್ಮ ಸಮಾಜದವರನ್ನು ಕಡೆಗಣಿಸಲಾಗಿತ್ತು. ಆದರೆ ನಾವು ಪಾದಯಾತ್ರೆ ಮಾಡಿ ಬೆಂಗಳೂರಿನಲ್ಲಿ ಸಮಾವೇಶ ಮಾಡಿದಾಗ ಎಲ್ಲರಿಗೂ ಸಮಾಜದ ಶಕ್ತಿ ಗೊತ್ತಾಗಿದೆ'.
'ಬಸವಕಲ್ಯಾಣ ಹಾಗೂ ಮಸ್ಕಿ ಚುಣಾವಣೆಗಳಲ್ಲಿ ನಮ್ಮ ಸಮಾಜ ಅಸಮಾಧಾನಗೊಂಡಿದ್ದು, ಬಿಜೆಪಿ ಹೈಕಮಾಂಡ್‌ಗೂ ಗೊತ್ತಿದೆ. ಕೆಲವೇ ದಿನಗಳಲ್ಲಿ ನಮ್ಮ ಸಮಾಜಕ್ಕೆ ಮೀಸಲಾತಿ ಘೋಷಣೆ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ' ಎಂದು ಹೇಳಿದರು.
ಇದನ್ನೂ ಓದಿ: ಬೆಳಗಾವಿಯ ನಾಲ್ಕು ಪ್ರಮುಖ ದೇವಸ್ಥಾನಗಳು ಓಪನ್.. ಷರತ್ತುಬದ್ಧ ಅನುಮತಿ ನೀಡಿದ ಜಿಲ್ಲಾಡಳಿತ..