ಬೆಳಗಾವಿ : ಜಮೀನಿನ ಹಕ್ಕು ಬದಲಾವಣೆ ಮಾಡಿಕೊಡಲು ಲಂಚ ಸ್ವೀಕರಿಸಿದ ಆರೋಪ ಪ್ರಕರಣದಲ್ಲಿ ಗ್ರಾಮಲೆಕ್ಕಾಧಿಕಾರಿಗೆ 4 ನೇ ಅಧಿಕ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಚಿಕ್ಕೋಡಿ ತಾಲೂಕಿನ ಬೋರಗಾಂವ ಗ್ರಾಮದ ಶಿವಲಿಂಗಯ್ಯ ಪರವಯ್ಯ ಬೋರಗಾಂವಿ ಶಿಕ್ಷೆಗೆ ಗುರಿಯಾದ ಲೆಕ್ಕಾಧಿಕಾರಿ. ಈತ ಇಚಲಕರಂಜಿ ಪಟ್ಟಣದ ರಾಜು ಲಕ್ಷ್ಮಣ ಪಾಶ್ಚಾಪುರೆ ಎನ್ನುವವರು ಬೋರಗಾಂವ ಗ್ರಾಮದ ವ್ಯಾಪ್ತಿಯಲ್ಲಿ 1.10 ಎಕರೆ ಜಮೀನಿನ ಹಕ್ಕು ಬದಲಾವಣೆಗೆ 8,000 ರೂ. ಬೇಡಿಕೆ ಇಟ್ಟು ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದ.
ಈ ಕುರಿತು ಶುಕ್ರವಾರ ವಿಚಾರಣೆ ನಡೆಸಿದ ಕೋರ್ಟ್ ಆರೋಪಿ ವಿರುದ್ಧದ ಅಪರಾಧ ಸಾಬೀತಾದ ಹಿನ್ನೆಲೆ 15 ಸಾವಿರ ರೂ. ದಂಡ, 4 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸರ್ಕಾರದ ಪರ ವಿಶೇಷ ಅಭಿಯೋಜಕ ಪ್ರವೀಣ್ ಅಗಸಗಿ ವಕಾಲತು ವಹಿಸಿದ್ದರು.