ಬೆಳಗಾವಿ: ಎಂ.ಸ್ಯಾಂಡ್ ಸಾಗಣಿಕೆ ಮಾಡುವ ಚಾಲಕರಿಗೆ ಮತ್ತು ವಾಹನ ಮಾಲೀಕರಿಗೆ ಕಂಪನಿ ಕೊಡುವ ಪಾಸ್ ಸಮಯ ಹೆಚ್ಚಳ ಮಾಡುವುದೂ ಸೇರಿದಂತೆ ಇತರೆ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಜೈ ಭೀಮ್ ಓಂ ಸಾಯಿ ಕಮರ್ಷಿಯಲ್ ವಾಹನಗಳ ಮಾಲೀಕರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಜೈ ಭೀಮ್ ಓಂ ಸಾಯಿ ಕಮರ್ಷಿಯಲ್ ವಾಹನಗಳ ಮಾಲೀಕರ ಸಂಘದ ಪದಾಧಿಕಾರಿಗಳು, ಎಂ.ಸ್ಯಾಂಡ್ ಕಂಪನಿಗಳಿಂದ ಪಾಸ್ ಸಮಯ ಹೆಚ್ಚಿಸಬೇಕು. ಅದೇ ರೀತಿ ಜಿಲ್ಲೆಯಲ್ಲಿ ಅನಧಿಕೃತ ಮರಳು ಸಾಗಣಿಕೆ ಹೆಚ್ಚಾಗುತ್ತಿದೆ. ಇದರಿಂದ ಅಧಿಕೃತವಾಗಿ ಪಾಸ್ ಪಡೆದುಕೊಂಡು ಮರಳು ಸಾಗಣಿಕೆ ಮಾಡುತ್ತಿರುವ ನಮಗೆ ಸಾಕಷ್ಟು ತೊಂದರೆ ನೀಡುತ್ತಿದ್ದಾರೆ. ಹೀಗಾಗಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕು. ಡಿಸೇಲ್ ಇನ್ಶೂರೆನ್ಸ್ ಟ್ಯಾಕ್ಸ್ ದರ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.
ಎಂ.ಸ್ಯಾಂಡ್ ಸಾಗಣಿಕೆ ಪಾಸ್ ಸಮಯವನ್ನು 2 ಗಂಟೆ ಕಡಿಮೆ ಮಾಡಿದ್ದರಿಂದ ಮರಳು ಸಾಗಿಸಲು ನಮಗೆ ಸಾಕಷ್ಟು ತೊಂದರೆ ಆಗುತ್ತಿದೆ. ಲಾಕ್‍ಡೌನ್ ಸಮಯದಲ್ಲಿ ಜೀವನ ನಡೆಸುವುದೇ ಕಷ್ಟವಾಗಿದ್ದು, ಡಿಸೇಲ್, ಇನ್ಶೂರೆನ್ಸ್, ಟ್ಯಾಕ್ಸ್ ಹೆಚ್ಚಾಗಿದ್ದರಿಂದ ಮತ್ತಷ್ಟು ಸಮಸ್ಯೆಯಾಗಿದೆ. ಹೀಗಾಗಿ ನಮ್ಮ ಈ ಎಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಬೇಕು. ಒಂದು ವೇಳೆ ಸೂಕ್ತ ಪರಿಹಾರ ನೀಡದಿದ್ರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾ ವೇಳೆ ಸಲೀಂ ಬಸರಿಕಟ್ಟಿ, ದೀಪಕ್ ದಂಡಿಮನಿ, ಅಸ್ಲಾಂ ಜಮಾದಾರ್, ಈರಪ್ಪ ಬಸರಿಕಟ್ಟಿ, ಅಕ್ಬರ್ ಶೇಖ್, ಗೌಸ್ ಸನದಿ ಉಪಸ್ಥಿತರಿದ್ದರು.