ಬೆಳಗಾವಿ: ಜಿಲ್ಲಾ ವಿಭಜನೆಗೆ ಎಲ್ಲಾ ಚರ್ಚೆಗಳು ನಡೆಯುತ್ತಿವೆ. ಚಿಕ್ಕೋಡಿ ಜಿಲ್ಲೆಯಾದರೆ ಖುಷಿಪಡುತ್ತೇನೆ. ಆದ್ರೆ, ನಿಪ್ಪಾಣಿ ಜಿಲ್ಲೆಯಾದರೆ ಇನ್ನೂ ಹೆಚ್ಚು ಸಂತೋಷ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಬೆಳಗಾವಿ ಧರ್ಮನಾಥ ಭವನದಲ್ಲಿ ಗ್ರಾಮ ಸ್ವರಾಜ್ ಸಮಾವೇಶದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ ವಿಭಜನೆಗೆ ಸಂಬಂಧಿಸಿ ಹೋರಾಟಗಳು ನಡೆಯುತ್ತಿವೆ. ಈ ಬಗ್ಗೆ ಹಿರಿಯರು, ಮುಖಂಡರು, ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ಆಗಬೇಕು. ಹಾಗೇ ಸುಮ್ಮನೆ ಹೇಳಿದ್ರೆ ಆಗೋದಿಲ್ಲ. ವಿಭಜನೆ ಬಗ್ಗೆ ಸಾಧಕ-ಬಾಧಕಗಳನ್ನು ಚರ್ಚಿಸಬೇಕು. ಆಡಳಿತಾತ್ಮಕ ದೃಷ್ಟಿಯಿಂದ ಜಿಲ್ಲೆ ವಿಭಜನೆ ಅಗತ್ಯ. ಹೀಗಾಗಿ ಚಿಕ್ಕೋಡಿ ಜಿಲ್ಲೆಯಾಗಬೇಕು ಎಂಬುದು ಎಲ್ಲರ ಬಯಕೆ. ಆದ್ರೆ, ಹಿರಿಯ ಪತ್ರಕರ್ತ, ಕನ್ನಡಪರ ಹೋರಾಟಗಾರ ಡಾ.ಪಾಟೀಲ ಪುಟ್ಟಪ್ಪ ಅವರು ಕಾನೂನಾತ್ಮಕವಾಗಿ ನಿಪ್ಪಾಣಿ ಜಿಲ್ಲೆಯಾಗಬೇಕೆಂದು ಅಭಿಪ್ರಾಯಪಟ್ಟಿದ್ದರು. ಚಿಕ್ಕೋಡಿ ಬೇರೆಯಲ್ಲ, ನಿಪ್ಪಾಣಿ ಬೇರೆಯಲ್ಲ. ಹಾಗಾಗಿ ನಿಪ್ಪಾಣಿ ಜಿಲ್ಲೆಯಾದರೆ ಹೆಚ್ಚು ಖುಷಿ ಎಂದರು.
ಸಂಪುಟ ವಿಸ್ತರಣೆ ವಿಚಾರ ಕುರಿತು ಪ್ರತಿಕ್ರಿಯಿಸುತ್ತಾ, ನಾನು ಸಂಪುಟದಲ್ಲಿ ಇರುವ ಏಕೈಕ ಮಹಿಳಾ ಮಂತ್ರಿಯಾಗಿರುವುದರಿಂದ ನನ್ನನ್ನು ಕೈಬಿಡುವ ಯಾವ ಸೂಚನೆ ನನಗೆ ಬಂದಿಲ್ಲ. ನಾನು 2 ಬಾರಿ ನಿಪ್ಪಾಣಿ ಕ್ಷೇತ್ರದಿಂದ ಆಯ್ಕೆಯಾಗಿದ್ದೇನೆ. ಮಾಧ್ಯಮಗಳ ಮೂಲಕ ಮಾತ್ರ ನನ್ನನ್ನು ಸಂಪುಟದಿಂದ ಕೈ ಬಿಡುವ ಊಹಾಪೋಹ ಕೇಳಿ ಬರುತ್ತಿವೆ. ಹೆಣ್ಣುಮಕ್ಕಳನ್ನೇ ಏಕೆ ಟಾರ್ಗೆಟ್ ಮಾಡ್ತೀರಿ ಅನ್ನೋದು ಗೊತ್ತಾಗುತ್ತಿಲ್ಲ ಎಂದು ಮಾಧ್ಯಮಗಳಿಗೆ ಪ್ರಶ್ನಿಸಿದರು.
ಇನ್ನು ಎರಡು ಬಾರಿ ಸಚಿವ ಸಂಪುಟದಿಂದ ಕೈಬಿಡುವ ಕುರಿತಂತೆ ನನ್ನ ಹೆಸರು ಕೇಳಿ ಬಂದಿತ್ತು. ಆದರೆ ಎರಡು ಬಾರಿಯೂ ಸುಳ್ಳಾಗಿದೆ. ಈ ಬಾರಿಯೂ ಸುಳ್ಳಾಗಲಿದೆ ಎಂದರು.