ಚಿಕ್ಕೋಡಿ: ಕರ್ನಾಟಕದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾಂಗ್ರೆಸಿಗರಿಗೆ ಆಪ್ತರಾಗಿರುವವರ ಮೇಲೆ ಐಟಿ ದಾಳಿ ನಡೆಯುತ್ತಿದೆ ಎಂದು ಸಚಿವ ದೇಶಪಾಂಡೆ ಆಕ್ರೋಶ ವ್ಯಕ್ತಪಡಿಸಿದರು.
ನಿಪ್ಪಾಣಿ ಮತಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಸಭೆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ವಿಷಯವಾಗಿ ಚುನಾವಣಾ ಆಯೋಗ ಹಾಗೂ ಕೇಂದ್ರದ ಠೇವಣಿ ಕಾರ್ಯದರ್ಶಿ ಅವರಿಗೂ ಕೂಡಾ ಪತ್ರ ಬರೆದು ಐಟಿ ದಾಳಿ ಕುರಿತು ದೂರು ನೀಡಲಾಗಿದೆ ಎಂದು ತಿಳಿಸಿದರು.
ಮರಾಠಿ ಬ್ಯಾನರ್ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಕನ್ನಡ ನಾಡು ನುಡಿ ಬಗ್ಗೆ ಎಲ್ಲರಿಗೂ ಅಭಿಮಾನ ಇರಬೇಕು. ರಾಜ್ಯದಲ್ಲಿ ಎಲ್ಲೇ ಇರಲಿ ಕನ್ನಡ ಫಲಕಗಳು ಇರಬೇಕು. ನಮ್ಮ ಕಾರ್ಯಕರ್ತರಿಗೆ ಮಾತೃಭಾಷೆ ಕನ್ನಡದಲ್ಲಿ ಹೇಳಿದರೆ ಮಾರ್ಗದರ್ಶನ ನೀಡಿದಂತಾಗುತ್ತದೆ ಅಂತಾ ಹೇಳಿದ್ರು.
ಯುಪಿಎ ಸರ್ಕಾರದಲ್ಲಿ ಮನಮೋಹನ್ ಸಿಂಗ್ ಪ್ರಧಾನಿ ಇದ್ದಾಗ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ 72 ಸಾವಿರ ಕೋಟಿ ರೂಪಾಯಿ ರೈತರ ಸಾಲಮನ್ನಾ ಮಾಡಿದ್ದ. ಆ ಕೆಲಸ ಮೋದಿ ಸರ್ಕಾರಕ್ಕೆ ಮಾಡಲು ಸಾಧ್ಯವಿದ್ದರೂ ಮಾಡಲಿಲ್ಲ. ಇಡೀ ದೇಶದಲ್ಲಿ ಬರಗಾಲ ಆವರಿಸಿದೆ. ನಮ್ಮ ರಾಜ್ಯದಲ್ಲಿ 155 ತಾಲೂಕುಗಳಲ್ಲಿ ಬರಗಾಲ ಇದೆ. ಇದರಿಂದ ಜನರು ನೀರಿಲ್ಲದೆ ಹೈರಾಣಾಗಿದ್ದಾರೆ ಎಂದು ಸಚಿವ ದೇಶಪಾಂಡೆ ತಿಳಿಸಿದ್ರು.