ಬೆಳಗಾವಿ: ದೇಶದ ಮೊಟ್ಟ ಮೊದಲ ಮಹಿಳಾ ಸೇನಾ ಭರ್ತಿ ರ‍್ಯಾಲಿ ಆಗಸ್ಟ್ 1 ರಿಂದ 5 ರವರೆಗೆ ನಗರದ ಮರಾಠಾ ಲಘು ಪದಾತಿದಳ(ಎಂ. ಎಲ್.ಐ.ಆರ್.ಸಿ) ಕೇಂದ್ರದಲ್ಲಿರುವ ಶಿವಾಜಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ದೇಶದಲ್ಲಿ ಮೊದಲ ಬಾರಿ ನಡೆಯುತ್ತಿರುವ ಮಹಿಳಾ ಮಿಲಿಟರಿ ಪೊಲೀಸ್ ಭರ್ತಿ ರ‍್ಯಾಲಿಯ ಸಿದ್ಧತೆ ಕುರಿತು ನೇಮಕಾತಿ ವಿಭಾಗದ ಉಪ ಮಹಾ ನಿರ್ದೇಶಕರಾದ ದಿಪೇಂದ್ರ ರಾವತ್ ಅವರು ಮಾಹಿತಿಯನ್ನು ನೀಡಿದ್ದಾರೆ. ದಕ್ಷಿಣ ಭಾರತದ ಐದು ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳದ ಅಭ್ಯರ್ಥಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್, ನಿಕೊಬಾರ್ ದ್ವೀಪಗಳು, ಪಾಂಡಿಚೇರಿ, ಲಕ್ಷದೀಪ ಹಾಗೂ ಮಾಹೆ ಜಿಲ್ಲೆಯ ಅಭ್ಯರ್ಥಿಗಳು ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.
ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿದ್ದ ಸುಮಾರು 15,000 ಅಭ್ಯರ್ಥಿಗಳ ಪೈಕಿ ಮೆಟ್ರಿಕ್ಯುಲೇಷನ್ ಮೆರಿಟ್ ಆಧಾರದ ಮೇಲೆ 3,000 ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಅವರು ಮಾತ್ರ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಮಹಿಳಾ ಮಿಲಿಟರಿ ಪೊಲೀಸರ ಆಯ್ಕೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ದೈಹಿಕ ಪರೀಕ್ಷೆ, ಓಟ, ಉದ್ದ ಜಿಗಿತ ಮತ್ತು ಎತ್ತರ ಜಿಗಿತಕ್ಕೆ ಮೈದಾನವನ್ನು ಸಜ್ಜುಗೊಳಿಸಲಾಗಿದೆ. ವೈದ್ಯಕೀಯ ಪರೀಕ್ಷೆ ಮಿಲಿಟರಿ ಆಸ್ಪತ್ರೆಯಲ್ಲಿ ನಡೆಸಲಾಗುವುದು ಎಂದು ದಿಪೇಂದ್ರ ರಾವತ್ ತಿಳಿಸಿದರು.
ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ನಡೆಸಲಾಗುತ್ತಿರುವ ಮಹಿಳಾ ಮಿಲಿಟರಿ ಪೊಲೀಸ್ ಭರ್ತಿ ರ್ಯಾಲಿಯನ್ನು ಅಚ್ಚುಕಟ್ಟಾಗಿ ನಡೆಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಸಂಪೂರ್ಣ ಸಹಕಾರ ನೀಡಿದೆ. ಆಯ್ಕೆ ಪ್ರಕ್ರಿಯೆ ಸುಗಮವಾಗಿ ನಡೆಸಲು ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆಯ್ಕೆ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿದ್ದು, ಅಭ್ಯರ್ಥಿಗಳು ಯಾವುದೇ ಮೂರನೇ ವ್ಯಕ್ತಿಗಳ ಮಾತಿಗೆ ಕಿವಿಗೊಡಬಾರದು. ಯಾವುದೇ ಅಕ್ರಮ ಸೇನಾ ನೇಮಕಾತಿಯಲ್ಲಿ ನಡೆಯುವುದಿಲ್ಲ. ಜೊತೆಗೆ ಎಲ್ಲ ಕಡೆಗಳಲ್ಲಿಯೂ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ ಎಂದು ದಿಪೇಂದ್ರ ರಾವತ್ ಹೇಳಿದ್ದಾರೆ.