ಚಿಕ್ಕೋಡಿ: ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದರಿಂದ ಕುಡಚಿ ಪಟ್ಟಣ ಸೇರಿದಂತೆ ರಾಯಬಾಗ ತಾಲೂಕಿನ ಜನರು ಆತಂಕಕ್ಕೆ ಒಳಗಾಗಿ ಭಯಭೀತರಾಗಿದ್ದಾರೆ.
ಕುಡಚಿ ಪಟ್ಟಣದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಪಟ್ಟಣದ ಪ್ರತಿ ಗಲ್ಲಿಗಲ್ಲಿಗಳಲ್ಲಿ ಪುರಸಭೆಯೊಂದಿಗೆ ಅಗ್ನಿಶಾಮಕ ದಳದವರು ರಾಸಾಯನಿಕ ದ್ರಾವಣ ಸಿಂಪಡಣೆ ಮಾಡಲಾಗುತ್ತಿದೆ.
ಆರೋಗ್ಯ, ಪೊಲೀಸ್ ಮತ್ತು ಪೌರಕಾರ್ಮಿಕರು ಮುನ್ನೆಚ್ಚರಿಕೆ ಕ್ರಮವಾಗಿ ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಕೊರೊನಾ ನಿರೋಧ ವಸ್ತ್ರಗಳನ್ನು ಧರಿಸಿ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಅಷ್ಟೇ ಅಲ್ಲದೇ ಮನೆ ಮನೆಗೆ ತೆರಳಿ ಪ್ರತಿಯೊಬ್ಬರನ್ನು ತಪಾಸಣೆ ಕಾರ್ಯ ಕೈಗೊಂಡಿದ್ದಾರೆ.
ಕೊರೊನಾ ಶಂಕಿತರನ್ನು ಕುಡಚಿ, ಅಳಗವಾಡಿ ಮತ್ತು ನಾಗರಾಳ ವಸತಿ ಶಾಲೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಈಗಾಗಲೇ ನೆಗೆಟಿವ್ ಬಂದ ವ್ಯಕ್ತಿಗಳ ರಕ್ತ ಮತ್ತು ಗಂಟಲು ದ್ರಾವಣವನ್ನು ಎರಡನೇ ಬಾರಿಗೆ ಪರೀಕ್ಷೆಗಾಗಿ ಲ್ಯಾಬ್‍ಗೆ ರವಾನಿಸಲಾಗುತ್ತಿದೆ. ಮಂಗಳವಾರ ರಾತ್ರಿ ಮಹಾರಾಷ್ಟ್ರದಿಂದ ಬಂದ ನಿಡಗುಂದಿ ಗ್ರಾಮದ 10 ಜನರನ್ನು ತಪಾಸಣೆ ಮಾಡಿ ಅವರನ್ನು ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಗಳ ಟ್ರಾವೆಲ್ ಹಿಸ್ಟರಿ ಮಾಹಿತಿ ಪಡೆಯಲು ತಾಲೂಕು ಆಡಳಿತ ವಿಫಲವಾಗಿದ್ದರಿಂದ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಲು ಕಾರಣವಾಗಿದೆ ಎಂದು ಆರೋಪಗಳು ಕೇಳಿ ಬರುತ್ತಿವೆ.