ಬೆಳಗಾವಿ: ಮಹಾಮಾರಿ ಕೊರೊನಾ ಭೀತಿಯ ನಡುವೆಯೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ''ಮಾತೃಪೂರ್ಣ ಯೋಜನೆ'' ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸಮರ್ಪಕವಾಗಿ ಅನುಷ್ಠಾನವಾಗುತ್ತಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಸ್ಲಮ್ ಪ್ರದೇಶಗಳು ಒಳಗೊಂಡಂತೆ ಜಿಲ್ಲೆಯ ಎಲ್ಲಾ ಬಾಣಂತಿಯರು, ಗರ್ಭಿಣಿಯರು ಹಾಗೂ ಆರು ವರ್ಷದೊಳಗಿನ ಮಕ್ಕಳಿಗೆ ನಿಗದಿತ ಸಮಯದಲ್ಲಿ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 5,331 ಅಂಗನವಾಡಿ ಕೇಂದ್ರಗಳಿದ್ದು, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಪೌಷ್ಟಿಕ ಆಹಾರ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಆರು ತಿಂಗಳಿಂದ 1 ವರ್ಷದವರೆಗಿನ 44,389 ಶಿಶುಗಳಿದ್ದಾರೆ. 1 ವರ್ಷದಿಂದ 2 ವರ್ಷ ವಯಸ್ಸಿನ 86,198 ಮಕ್ಕಳು, 2 ವರ್ಷದಿಂದ 3 ವರ್ಷ ವಯಸ್ಸಿನ 93,887 ಮಕ್ಕಳು, 3 ವರ್ಷದಿಂದ 5 ವರ್ಷದವರೆಗೆ 1,27,501 ಹಾಗೂ ಐದು ವರ್ಷದಿಂದ ಆರು ವರ್ಷ ವಯಸ್ಸಿನ 42,914 ಮಕ್ಕಳಿದ್ದಾರೆ.
ಯಾವ ಪದಾರ್ಥ ಎಷ್ಟು ವಿತರಣೆ:
ಆರು ತಿಂಗಳಿಂದ 3 ವರ್ಷ ವಯಸ್ಸಿನ ಮಕ್ಕಳಿಗೆ ಪುಷ್ಠಿಪುಡಿ ರೂಪದ ಆಹಾರ ಪ್ರತೀ ದಿನಕ್ಕೆ 75 ಗ್ರಾಂನಂತೆ, 25 ದಿನಕ್ಕೆ 300 ಗ್ರಾಂ ಹಾಲಿನ ಪುಡಿ ಹಾಗೂ 200 ಗ್ರಾಂ ಸಕ್ಕರೆ ನೀಡಲಾಗುತ್ತಿದೆ. 3 ವರ್ಷದಿಂದ 6 ವರ್ಷದೊಳಗಿನ ಮಕ್ಕಳಿಗೆ 25 ದಿನಗಳವರೆಗೆ 300 ಗ್ರಾಂ ಹಾಲಿನ ಪುಡಿ, 200 ಗ್ರಾಂ ಸಕ್ಕರೆ, 800 ಗ್ರಾಂ ಹೆಸರು ಕಾಳು, 2 ಕೆಜಿ ಅಕ್ಕಿ/ಗೋಧಿ, ತೊಗರಿ ಬೇಳೆ ಅರ್ಧ ಕೆಜಿ, ಮಸಾಲೆ 150 ಗ್ರಾಂ ಹಾಗೂ 8 ಮೊಟ್ಟೆಗಳನ್ನು ವಿತರಿಸಲಾಗುತ್ತಿದೆ.
ಇನ್ನು ಬಾಣಂತಿಯರಿಗೆ ಹಾಗೂ ಗರ್ಭಿಣಿಯರಿಗೆ ಹಾಲಿನ ಪುಡಿ 500 ಗ್ರಾಂ, ಸಕ್ಕರೆ 300 ಗ್ರಾಂ, ಮೊಟ್ಟೆ 25, ಹೆಸರು ಕಾಳು ಅರ್ಧ ಕೆಜಿ, ಅಕ್ಕಿ/ಗೋಧಿ 4 ಕೆಜಿ, ತೊಗರಿ ಬೇಳೆ 400 ಗ್ರಾಂ, ಶೇಂಗಾ ಅರ್ಧ ಕೆಜಿ, ಬೆಲ್ಲ ಅರ್ಧ ಕೆಜಿ ಹಾಗೂ 200 ಗ್ರಾಂ ಮಸಾಲೆಯನ್ನು ಸರ್ಕಾರದಿಂದ ವಿತರಣೆ ಮಾಡಲಾಗುತ್ತಿದೆ.
ಕೊರೊನಾ, ಲಾಕ್ಡೌನ್ನಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಪೌಷ್ಟಿಕ ಆಹಾರಗಳನ್ನು ಸಮರ್ಪಕವಾಗಿ ವಿತರಣೆ ಮಾಡಲಾಗಿದೆ ಎಂದು ಬೆಳಗಾವಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಸವರಾಜ ವರವಟ್ಟಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಎರಡೆರಡು ಕೆಲಸ! :
ಕೊರೊನಾ ನಿಯಂತ್ರಣ ಸಮಯದಲ್ಲಿ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರು ಎರಡೆರಡು ಕೆಲಸವನ್ನು ಜವಾಬ್ದಾರಿಯುತರಾಗಿ ನಿಭಾಯಿಸಿದ್ದಾರೆ. ಸೋಂಕಿತರ ಸಂಪರ್ಕಕ್ಕೆ ಬಂದವರ ಮಾಹಿತಿ ಕಲೆಹಾಕಿ ಆರೋಗ್ಯ ಇಲಾಖೆಗೆ ನೀಡಿದ್ದಾರೆ. ಜೊತೆಗೆ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ವಿತರಣೆ ಮಾಡಿದ್ದಾರೆ. ಸರ್ಕಾರದ ಮಾತೃಪೂರ್ಣ ಯೋಜನೆ ಸಮರ್ಪಕ ಅನುಷ್ಠಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಶ್ಲಾಘನೀಯ ಕೆಲಸ ಮಾಡಿದ್ದಾರೆ.