ಬೆಳಗಾವಿ: ಕರ್ನಾಟಕದಲ್ಲಿ ಬೆಂಗಳೂರು ಬಿಟ್ಟರೆ ಬೆಳಗಾವಿ ಕೊರೊನಾ ಸಮಸ್ಯೆ ಎದುರಿಸುವ 2ನೇ ಜಿಲ್ಲೆಯಾಗಿದ್ದರೂ ಜಿಲ್ಲಾಡಳಿತದಿಂದ ಸರಿಯಾಗಿ ಇಂಜೆಕ್ಷನ್ ಹಾಗೂ ಆಕ್ಸಿಜನ್ ಪೂರೈಕೆಯಾಗುತ್ತಿಲ್ಲ ಎಂದು ಸ್ಪಂದನ ಆಸ್ಪತ್ರೆ ವೈದ್ಯ ಡಾ. ಸುಭಾಷ್ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಮೊದಲನೇ ಅಲೆಗಿಂತ 2ನೇ ಅಲೆಗೆ ಬಹಳ ವ್ಯತ್ಯಾಸವಿದೆ. ಮೊದಲ ಅಲೆಯಲ್ಲಿ ಮಿನಿಮಮ್ ಆಕ್ಸಿಜನ್ ಪಡೆದವರು ಆರೋಗ್ಯವಂತರಾಗಿ ಮನೆಗೆ ತೆರಳುತ್ತಿದ್ದರು. ಆದರೀಗ ಪರಿಸ್ಥಿತಿ ಬದಲಾಗಿದೆ. 2ನೇ ಅಲೆಗೆ ರೋಗಿಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಅದರಂತೆ ಹೆಚ್ಚಿನ ಆಕ್ಸಿಜನ್ ಬೇಕಾಗಿದೆ. ಇದನ್ನು ನಿಭಾಯಿಸಲು ಜಿಲ್ಲಾಡಳಿತಕ್ಕೆ ಆಗುತ್ತಿರುವ ತೊಂದರೆ ಬಗ್ಗೆ ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಅಷ್ಟೇ ತೊಂದರೆ ನಮಗೂ ಆಗುತ್ತಿದೆ. ರೋಗಿಗಳಿಗೆ ಉತ್ತರಿಸುವುದು ಬಹಳ ಕಷ್ಟವಾಗುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಆಕ್ಸಿಜನ್, ಇಂಜೆಕ್ಷನ್ ನೀಡದಿದ್ದರೆ ಇನ್ನೆರಡು ದಿನಗಳಲ್ಲಿ ಆಸ್ಪತ್ರೆ ಬಂದ್:
ಜಿಲ್ಲಾಡಳಿತದ ಆದೇಶದಂತೆ ನಮ್ಮ ಆಸ್ಪತ್ರೆಗಳಲ್ಲಿ ಶೇ. 50ರಷ್ಟು ಬೆಡ್ಗಳನ್ನು ಒದಗಿಸಿದ್ದೇವೆ. ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರೂ ನಮ್ಮ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ. ಹೀಗಾಗಿ ನಾವು ನಿರೀಕ್ಷೆ ಮಾಡಿದಷ್ಟು ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳಿಂದ ಸಹಕಾರ ಸಿಗುತ್ತಿಲ್ಲ. ಇದರಿಂದ ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ನಮಗೀಗ ಎರಡೇ ದಾರಿಗಳಿದ್ದು, ಸರಿಯಾದ ಸಮಯಕ್ಕೆ ಜಿಲ್ಲಾಡಳಿತ ಆಕ್ಸಿಜನ್, ಇಂಜೆಕ್ಷನ್ ನೀಡಿದರೆ ಮಾತ್ರ ಆಸ್ಪತ್ರೆಗಳನ್ನ ನಡೆಸುತ್ತೇವೆ. ಇಲ್ಲವಾದರೆ ಇನ್ನೆರಡು ದಿನ ನೋಡಿ ಆಸ್ಪತ್ರೆ ಬಂದ್ ಮಾಡಿ ಡಿಸಿ ಬಳಿ ಕೀ ಕೊಡ್ತೀವಿ. ಎಲ್ಲ ಸಮಸ್ಯೆ ಬಗೆಹರಿಸಿ ಮರಳಿ ಕೀ ಕೊಟ್ರೆ ಆಸ್ಪತ್ರೆ ನಡೆಸುತ್ತೇವೆ. ಇಲ್ಲವಾದ್ರೆ ಆಸ್ಪತ್ರೆ ಬಂದ್ ಮಾಡಿ ಹೆಂಡತಿ-ಮಕ್ಕಳ ಜೊತೆ ಮನೆಯಲ್ಲಿಯೇ ಇರ್ತೀವಿ ಎಂದಿದ್ದಾರೆ.
ಖಾಸಗಿ ಆಸ್ಪತ್ರೆಗಳು ಜಿಲ್ಲಾಡಳಿತದ ಮಧ್ಯೆ ಹಗ್ಗಜಗ್ಗಾಟ.. ರೋಗಿಗಳ ನರಳಾಟ:
ಜಿಲ್ಲೆಯಲ್ಲಿ ಆಕ್ಸಿಜನ್ 'ಯಮ'ರ್ಜೆನ್ಸಿ ಉದ್ಭವ ಆಗಿದ್ದು, ನೈಜ ಸ್ಥಿತಿಯನ್ನು ಎಳೆ ಎಳೆಯಾಗಿ ಖಾಸಗಿ ಆಸ್ಪತ್ರೆ ವೈದ್ಯರು ಬಿಚ್ಚಿಟ್ಟಿದ್ದಾರೆ. ಬೆಂಗಳೂರು ಬಿಟ್ರೆ ಬೆಳಗಾವಿಯೇ 2ನೇ ಪ್ರಾಬ್ಲಂ ಫೇಸಿಂಗ್ ಸಿಟಿ ಆಗಿದೆ. ಮನೆ, ಹೆಂಡತಿ, ಮಕ್ಕಳನ್ನು ಬಿಟ್ಟು ನಾವು ಸೇವೆ ಮಾಡುತ್ತಿದ್ದೇವೆ. ಆದ್ರೆ, ಜಿಲ್ಲಾಡಳಿತ, ಸಂಬಂಧಿತ ಅಧಿಕಾರಿಗಳಿಂದ ನಮಗೆ ಬೆಂಬಲ ಸಿಗ್ತಿಲ್ಲ. ನಾವು 30 ಸಿಲಿಂಡರ್ ಕೇಳಿದಾಗ 10 ಸಿಲಿಂಡರ್ ಕೊಟ್ಟು ಮ್ಯಾನೇಜ್ ಮಾಡಿ ಅಂತಾರೆ. ಹತ್ತು ಬಾರಿ ಅಧಿಕಾರಿಗಳಿಗೆ ಕರೆ ಮಾಡಿದಾಗ ಒಂದು ಬಾರಿ ರಿಸೀವ್ ಮಾಡ್ತಾರೆ. ನಿನ್ನೆ ಮತ್ತು ಇಂದು ಆಕ್ಸಿಜನ್ ಕೊರತೆಯಿಂದ ಬೆಳಗಾವಿಯಲ್ಲಿ ಹೆಚ್ಚು ಸಾವಾಗಿದೆ. ಅಧಿಕಾರಿಗಳು ಸಭೆ ಕರೆದು ಆಕ್ಸಿಜನ್ ಕೊರತೆ ಬಗ್ಗೆ ಯಾರಿಗೂ ಹೇಳ್ಬೇಡಿ, ನಾವು ಕೊಡ್ತೀವಿ ಅಂತಾರೆ. ವೈದ್ಯಕೀಯ ಸೇವೆಗಿಂತ ನಮಗೆ ಕೆಲಸ ಜಾಸ್ತಿ ಆಗ್ತಿದೆ.
ಕಳೆದ ನಾಲ್ಕು ದಿನಗಳಿಂದ ಸರಿಯಾಗಿ ಆಕ್ಸಿಜನ್ ಪೂರೈಕೆ ಆಗ್ತಿಲ್ಲ. ನಿನ್ನೆ 25 ರೋಗಿಗಳನ್ನು ಡಿಸ್ಚಾರ್ಜ್ ಮಾಡಿ ಬೇರೆಡೆ ಹೋಗಿ ಎಂದಿದ್ದೇವೆ. ಸಮರ್ಪಕ ಆಕ್ಸಿಜನ್ ಸಿಗದೆ ಬೆಳಗಾವಿಯಲ್ಲಿ ಅತಿ ಹೆಚ್ಚು ಸಾವು ಸಂಭವಿಸುತ್ತಿವೆ. ಅಧಿಕಾರಿಗಳಿಗೆ ಕರೆ ಮಾಡಿದ್ರೆ ಮ್ಯಾನೇಜ್ ಮಾಡ್ರಿ ಅಂತಾರೆ. ಔಷಧಿ ಇಲ್ಲ ಅಂದ್ರೆ ಪರ್ಯಾಯ ಔಷಧಿ ಕೊಡಬಹುದು. ಆದ್ರೆ, ಆಕ್ಸಿಜನ್ ಇಲ್ಲ ಅಂದ್ರೆ ನಾವು ಕೈ ಹಿಡಿದು ಪಂಪ್ ಹೊಡೆಯೊಕ್ಕಾಗುತ್ತಾ?. ದಿನವೂ ಬೆಡ್ ಬೇಕು ಅಂತಾ 300 ಜನರು ಕರೆ ಮಾಡುತ್ತಿದ್ದಾರೆ. ಆಕ್ಸಿಜನ್ ಇಲ್ಲ ಅಂದ್ರೆ ಏನೂ ಪ್ರಯೋಜನವಿಲ್ಲ ಎಂದರು.
ಆಕ್ಸಿಜನ್ ಇಲ್ಲದೆ ಹೆಚ್ಚು ಸಾವು:
ಬೆಳಗಾವಿಯಲ್ಲಿ ಸದ್ಯದ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಸ್ವತಃ ನಾವೇ ಕಾಲಿಗೆ ಬಿದ್ದು ರೋಗಿಗಳನ್ನು ಕಳುಹಿಸುವ ಪರಿಸ್ಥಿತಿ ಎದುರಾಗಿದೆ. ಬೆಳಗಾವಿಯಲ್ಲಿ ಆಕ್ಸಿಜನ್ ಇಲ್ಲದೇ ಸಾಕಷ್ಟು ಜನರು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಜನರಿಗೆ ಕೈ ಮುಗಿದು ಕೇಳುತ್ತೇವೆ. ಅನವಶ್ಯಕವಾಗಿ ಯಾರೂ ಹೊರಗಡೆ ಬರದೆ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ಸಂಬಂಧಿಕರು ಕೊರೊನಾ ರೋಗಿಗಳ ಸಂಪರ್ಕಕ್ಕೆ ಉದ್ಧಟತನ ತೋರಬಾರದು. ಇದರಿಂದ ಕುಟುಂಬದ ಎಲ್ಲ ಸದಸ್ಯರಿಗೂ ಕೊರೊನಾ ತಗಲುವ ಸಾಧ್ಯತೆಯಿದೆ. ನನಗೇನು ಆಗೋದಿಲ್ಲ ಎಂಬ ಭಮ್ರೆಮಿಯಲ್ಲಿರುವ ಜನರು ಅದರಿಂದ ಹೊರಗೆ ಬರಬೇಕು ಎಂದು ವೈದ್ಯ ಡಾ. ಸುಭಾಷ್ ಪಾಟೀಲ್ ಸಲಹೆ ನೀಡಿದ್ದಾರೆ.
ಓದಿ: ಚಾಮರಾಜನಗರ ಆಸ್ಪತ್ರೆಯಲ್ಲಿ ರೋಗಿಗಳ ಸಾವು ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶ