ಬೆಳಗಾವಿ: ಮಹಾಮಾರಿ ಕೋವಿಡ್ ಎರಡನೇ ಅಲೆ ಹರಡದಂತೆ ಟಫ್ ರೂಲ್ಸ್ ಜಾರಿ ಹಿನ್ನೆಲೆ ಹೋಟೆಲ್‌ಗಳಲ್ಲಿ ಕೇವಲ ಪಾರ್ಸಲ್ ಸೇವೆಗಳಿಗೆ ಅವಕಾಶ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೋಟೆಲ್ ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ.
ಸದಾ ಗ್ರಾಹಕರಿಂದ ತುಂಬಿತುಳುಕುತ್ತಿದ್ದ ನಗರದಲ್ಲಿರುವ ಬಹುತೇಕ ಹೋಟೆಲ್ಗಳು ಇಂದು ಖಾಲಿ ಖಾಲಿ ಇವೆ. ಹೋಟೆಲ್‌ಗಳಲ್ಲಿ ಪಾರ್ಸಲ್ ಸೇವೆಗಷ್ಟೇ ಅವಕಾಶ ಇರುವುದರಿಂದ ಹೆಚ್ಚಿನ ಗ್ರಾಹಕರು ಹೋಟೆಲ್ಗಳಿಗೆ ಬರುತ್ತಿಲ್ಲ. ಕೇವಲ ಬೆರಳೆಣಿಕೆಯಷ್ಟು ಗ್ರಾಹಕರು ಬರುತ್ತಿದ್ದು, ಹೋಟೆಲ್ ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಪಂಚವಟಿ ಹೋಟೆಲ್ ಮಾಲೀಕ ರವಿರಾಜ್, ನಮ್ಮ ಹೋಟೆಲ್‌ನಲ್ಲಿ 120 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಮೊದಲೇ ಹೋಟೆಲ್ ಉದ್ಯಮ ಸಂಕಷ್ಟದಲ್ಲಿದೆ. ಪಾರ್ಸಲ್ ಸೇವೆ ಮಾತ್ರ ಇರೋದರಿಂದ ಗ್ರಾಹಕರೂ ಕೂಡ ಬರ್ತಿಲ್ಲ. ಹೋಟೆಲ್‌ಗಳಲ್ಲಿ ಶೇ. 50ರಷ್ಟು ಗ್ರಾಹಕರಿಗಾದರೂ ಸೇವೆಗೆ ಸರ್ಕಾರ ಅವಕಾಶ ಕಲ್ಪಿಸಬೇಕು ಎಂದರು.
ಇದನ್ನೂ ಓದಿ: ಅಂತಿಮ ವರ್ಷದ ವೈದ್ಯಕೀಯ ಪರೀಕ್ಷೆ ಎರಡು ತಿಂಗಳು ಮುಂದೂಡಿಕೆ: ಡಾ.ಕೆ.ಸುಧಾಕರ್
ದೂರದ ಊರಿನಿಂದ ಬರುವ ಪ್ರಯಾಣಿಕರು ಪಾರ್ಸಲ್ ತಗೆದುಕೊಂಡು ರಸ್ತೆ ಮೇಲೆ ನಿಂತು ತಿನ್ನೋ ಪರಿಸ್ಥಿತಿ ಬಂದಿದೆ. ಆದ್ರೆ, ಸರ್ಕಾರ ಹೊರಡಿಸಿದ ಕೋವಿಡ್ ನಿಯಮಾವಳಿ ಪ್ರಕಾರ ಸಾಮಾಜಿಕ ಅಂತರ ಕಾಯ್ದುಕೊಂಡು ಸೇವೆ ನೀಡಲು ಸಿದ್ಧರಿದ್ದೇವೆ. ಹೀಗಾಗಿ ಸರ್ಕಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸಬೇಕು. ಶೇ. 50ರಷ್ಟು ಗ್ರಾಹಕರಿಗಾದರೂ ಸೇವೆ ನೀಡಲು ಅವಕಾಶ ಕಲ್ಪಿಸಲಿ ಎಂದು ಒತ್ತಾಯ ಮಾಡಿದರು.