ಬೆಳಗಾವಿ: ಈ ಊರಲ್ಲಿ ಮುಸ್ಲಿಂ ಕುಟುಂಬಗಳಿಲ್ಲ. ಆದರೂ ಕಳೆದ 11 ವರ್ಷಗಳಿಂದ ಹಿಂದೂಗಳು ಮೊಹರಂ ಹಬ್ಬ ಆಚರಣೆ ಮಾಡುತ್ತಾ ನಾಡಿನ ಜನತೆಯ ಗಮನ ಸೆಳೆದಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹರ್ಲಾಪುರ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಕುಟುಂಬಗಳಿಲ್ಲ. ಆದರೆ, ಹಿಂದೂಗಳೇ ಸೇರಿಕೊಂಡು ಹಲವು ವರ್ಷಗಳಿಂದ ಮೊಹರಂ ಆಚರಿಸಿಕೊಂಡು ಬಂದಿದ್ದಾರೆ. ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಮೊಹರಂ ಆಚರಣೆ ಮಾಡಿದ್ದಾರೆ.
ಕಳೆದ 11 ವರ್ಷಗಳ ಹಿಂದೆ ತಮ್ಮ ಸ್ವಂತ ಹಣದಿಂದ ಫಕ್ಕೀರೇಶ್ವರ ದರ್ಗಾ ನಿರ್ಮಿಸಿದ್ದಾರೆ. ಅಂದಿನಿಂದ ಇಂದಿನವರೆಗೂ ಪ್ರತಿವರ್ಷ ಮೊಹರಂ ನಿಮಿತ್ತವಾಗಿ ಇಲ್ಲಿ ಪಂಜಾ ಪ್ರತಿಷ್ಠಾಪಿಸಿ, ಇಡೀ ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಿ ಪೂಜೆ ಸಲ್ಲಿಸಲಾಗುತ್ತದೆ. ವಿಶೇಷ ಅಂದ್ರೆ, ಫಕ್ಕೀರೇಶ್ವರ ದರ್ಗಾ ಪೂಜೆಯನ್ನು ಹಿಂದೂ ಮನೆತನದವರೇ ಮುಂದುವರೆಸಿಕೊಂಡು ಬಂದಿದ್ದಾರೆ.